ಸಿದ್ದಾಪುರ, ಮೇ 6: 5ನೇ ವರ್ಷದ ಕೂರ್ಗ್ ಹಿಂದೂ ಮಲಯಾಳಿ ಕ್ರಿಕೆಟ್ ಕಪ್ನ 5ನೇ ವರ್ಷದ ಪಂದ್ಯಾಟಕ್ಕೆ ಚೆನ್ನಯ್ಯನಕೋಟೆಯಲ್ಲಿ ಚಾಲನೆ ದೊರೆಯಿತು.ಚೆನ್ನಯ್ಯನಕೋಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೂರ್ಗ್ ಹಿಂದೂ ಮಲಯಾಳಿ ಸಂಘ ಹಾಗೂ ಮಾವೇಲಿ ಫ್ರೆಂಡ್ಸ್ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಮುದಾಯ ಬಾಂಧವರ 5ನೇ ವರ್ಷದ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಸಮುದಾಯ ಬಾಂಧವರನ್ನು ಓಗ್ಗೂಡಿಸಲು ಹಾಗೂ ಪ್ರೀತಿ, ವಿಶ್ವಾಸ, ಸಂಬಂಧ ವೃದ್ಧಿಗಾಗಿ ಪಂದ್ಯಾವಳಿಯನ್ನು ನಡೆಸುವದು ಶ್ಲಾಘನೀಯ. ಕ್ರೀಡೆ ಮಾನಸಿಕ ಹಾಗೂ ದೈಹಿಕ ವೃದ್ಧಿಗೆ ಸಹಕಾರಿಯಾಗುವದಲ್ಲದೇ, ಬಾಂಧವ್ಯಗಳು ಬೆಳೆಯುತ್ತದೆ. ಕ್ರೀಡಾಕೂಟಗಳಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ ಎಂದರು.
ಜಿ.ಪಂ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದೂ ಮಲಯಾಳಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಸಮುದಾಯ ಬಾಂಧÀವರ ನಡುವಿನ ಸ್ನೇಹ ವೃದ್ಧಿಸಲು ಕ್ರಿಡಾಕೂಟ ಸಹಕಾರಿಯಾಗುತ್ತದೆ ಎಂದರು.
ಸೋಮವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 60 ಸಾವಿರ ಮಂದಿ ಹಿಂದೂ ಮಲಯಾಳಿ ಬಾಂಧವರು ಇದ್ದು, ಯುವ ಜನತೆಯನ್ನು ಒಗ್ಗೂಡಿಸಲು ಕ್ರಿಕೆಟ್ ಸಹಕಾರಿಯಾಗಲಿದೆ ಎಂದರು.
ತಾ.ಪಂ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ ಮಾತನಾಡಿದರು.
ವೇದಿಕೆಯಲ್ಲಿ ಕೂರ್ಗ್ ಹಿಂದೂ ಮಲಯಾಳಿ ಸಂಘದ ಜಿಲ್ಲಾಧ್ಯಕ್ಷ ಹರ್ಷವರ್ಧನ್, ಚೆನ್ನಯ್ಯನಕೋಟೆ ಅಧ್ಯಕ್ಷ ವಿಜು, ತಾ.ಪಂ. ಸದಸ್ಯ ಕೆ.ಎಂ.ಜನೀಶ್, ಅಮ್ಮತ್ತಿ ಗ್ರಾ.ಪಂ. ಉಪಾಧ್ಯಕ್ಷ ಎಂ.ಎಚ್. ನಿತೀಶ್, ಗ್ರಾ.ಪಂ. ಸದಸ್ಯೆ ಶಿಲ್ಪ ಸೇರಿದಂತೆ ಇತರರು ಇದ್ದರು.