ಸೋಮವಾರಪೇಟೆ, ಮೇ 8: ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಲು ಕೃಷಿಕರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಚೆಟ್ಟಳ್ಳಿ ಕಾಫಿ ಸಂಶೋಧನ ಉಪಕೇಂದ್ರದ ಸಾವಯವ ಕೃಷಿ ತಜ್ಞ ರುದ್ರೇಶ್ಗೌಡ ಹೇಳಿದರು.
ಸಮೀಪದ ಹಿರಿಕರ ಗ್ರಾಮದ ಶ್ರೀಬಸವೇಶ್ವರ ಸ್ವಸಹಾಯ ಸಂಘ ಹಾಗೂ ಬೆಂಗಳೂರು ಐಐಬಿಎಂ ಸಂಸ್ಥೆಯ ಆಶ್ರಯದಲ್ಲಿ, ಪರಿಸರ ಸ್ನೇಹಿ ಕಾಫಿ ಪಲ್ಪಿಂಗ್ ಘಟಕದಲ್ಲಿ ಬೆಳೆಗಾರರಿಗೆ ಆಯೋಜಿಸಿದ್ದ ಕಾಫಿ ಹಣ್ಣಿನ ಸಿಪ್ಪೆಯಿಂದ(ಹೊಟ್ಟು) ಸಾವಯವ ಗೊಬ್ಬರ ತಯಾರಿಕೆಯ ಬಗೆಗಿನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಫಿ ಹಣ್ಣನ್ನು ಪಲ್ಪಿಂಗ್ ಮಾಡಿದ ನಂತರ ಅದರ ಸಿಪ್ಪೆ(ಹೊಟ್ಟು)ಯಿಂದ ಸಾವಯವ ಗೊಬ್ಬರವನ್ನು ಉತ್ಪಾದಿಸಬಹುದು. ಕಾಫಿ ತೋಟದಲ್ಲಿ ನೆರಳು ಇರುವ ಜಾಗದಲ್ಲಿ ಸಣ್ಣ ಪ್ರಮಾಣದ ಹೊಂಡವನ್ನು ನಿರ್ಮಿಸಿ, ಕಾಫಿ ಸಿಪ್ಪೆಯನ್ನು ಹಾಕಿ, ಅದರ ಮೇಲೆ ರಾಕ್ಪಾಸ್ಪೇಟ್, ಜೈವಿಕ ಶಿಲೀಂದ್ರನಾಶಕ, ಕಾಡುಮಣ್ಣು ಹಾಗೂ ಮರ ಗಿಡಗಳ ಸೊಪ್ಪನ್ನು ಹಾಕಿ ವಾರಕ್ಕೊಮ್ಮೆ ನಿಗದಿತ ಪ್ರಮಾಣದಲ್ಲಿ ನೀರನ್ನು ಹಾಕಬೇಕು. 1 ತಿಂಗಳ ನಂತರ ಎಲ್ಲವನ್ನು ಮಿಶ್ರಣ ಮಾಡಬೇಕು.
ಎರಡನೆ ತಿಂಗಳಲ್ಲಿ ಸಾವಯವ ಗೊಬ್ಬರ ತಯಾರಾಗುತ್ತದೆ ಎಂದು ಹೇಳಿದರು.
ಹಿಂಗಾರು ಹಾಗೂ ಮುಂಗಾರು ಮಳೆ ಬೀಳುವ ಸಮಯದಲ್ಲಿ ಕಾಫಿ ಗಿಡದ ಬುಡಕ್ಕೆ 2ಕೆ.ಜಿ.ಯಂತೆ ವಾರ್ಷಿಕವಾಗಿ ಮೂರು ಬಾರಿ ಹಾಕಿದರೆ, ಗಿಡಗಳು ಆರೋಗ್ಯ ಪೂರ್ಣವಾಗಿ ಬೆಳೆದು ಉತ್ತಮ ಫಸಲು ಪಡೆಯಬಹುದು ಎಂದು ಮಾಹಿತಿ ನೀಡಿದರು. ಒಂದು ಕೆ.ಜಿ.ಸಾವಯವ ಗೊಬ್ಬರ ತಯಾರಿಕೆಗೆ ಕೇವಲ 90ಪೈಸೆ ವೆಚ್ಚವಾಗುತ್ತದೆ. ಆದರೆ ರಾಸಾಯನಿಕ ಗೊಬ್ಬರ ಹಾಕಲು ಕೆ.ಜಿ.ವೊಂದಕ್ಕೆ 20 ರೂ.ಗಳನ್ನು ವ್ಯಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾಫಿ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ತೀರ್ಥಮಲ್ಲೇಶ್, ತೋಳೂರುಶೆಟ್ಟಳ್ಳಿ ಸ್ವಸಹಾಯ ಸಂಘದ ಅಧ್ಯಕ್ಷ ಗಣೇಶ್, ಕಾಫಿ ಬೆಳೆಗಾರರಾದ ಕೀರ್ತಿ ಮುತ್ತಣ್ಣ, ಹೆಚ್.ಎಸ್. ಶರಣ್ ಉಪಸ್ಥಿತರಿದ್ದರು.