ಮಡಿಕೇರಿ, ಮೇ 8: ಕೊಡಗಿನ ಬುಡಕಟ್ಟು ಜನರ ಬೇಡಿಕೆಗಳಿಗೆ ಒಂದು ತಿಂಗಳೊಳಗೆ ಸ್ಪಂದಿಸುವದಾಗಿ ಆಡಳಿತ ವ್ಯವಸ್ಥೆ ನೀಡಿದ್ದ ಭರವಸೆ ಹುಸಿಯಾಗಿರುವ ಹಿನ್ನೆಲೆಯಲ್ಲಿ ತಾ. 16 ರಿಂದ ಮತ್ತೆ ನಗರದ ಗಿರಿಜನ ಅಭಿವೃದ್ಧಿ ಇಲಾಖೆÉ ಎದುರು ಅಮರಾಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿsಸುವದಾಗಿ ಬುಡಕಟ್ಟು ಸಮುದಾಯಗಳ ಒಕ್ಕೂಟ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಪಿ.ತಮ್ಮಯ್ಯ ಬುಡಕಟ್ಟು ಜನರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇತ್ತೀಚೆಗೆ ಐಟಿಡಿಪಿ ಕಚೇರಿ ಎದುರು 16 ದಿನಗಳ ಕಾಲ ಅಹೋರಾತ್ರಿ ಧರಣಿ ಮುಷ್ಕರ ನಡೆಸಲಾಗಿತ್ತು. ಈ ಹಿನ್ನೆಲೆ ವಿಶೇಷ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಒಂದು ತಿಂಗಳಿನೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಭರವಸೆ ಹಿನ್ನೆಲೆ ಧರಣಿಯನ್ನು ಕೈಬಿಡಲಾಗಿತ್ತಾದರೂ ಇದೀಗ ಒಂದು ತಿಂಗಳು ಕಳೆದರೂ ಅಧಿಕಾರಿಗಳಿಂದ ಯಾವದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದರು.
ನಿರಂತರವಾಗಿ ಮೂಲನಿವಾಸಿ ಬುಡಕಟ್ಟು ಜನರನ್ನು ಕಡೆಗಣಿಸುತ್ತಲೇ ಬರುತ್ತಿರುವದರಿಂದ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸುವದು ಅನಿವಾರ್ಯವಾಗಿದೆ ಎಂದರು.
ಪ್ರಕೃತಿಯೊಂದಿಗೆ ಭಾವನಾತ್ಮಕವಾಗಿ ಬದುಕುತ್ತಿರುವ ಆದಿವಾಸಿಗಳ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ 54 ಸಾವಿರವಿದೆ. ಉದಾರೀಕರಣ, ಜಾಗತೀಕರಣ, ಖಾಸಗೀಕರಣದ ಹೆಸರಿನಲ್ಲಿ ಒಕ್ಕಲೆಬ್ಬಿಸುವದು ನಮ್ಮ ಮೇಲಿನ ಭೀಕರ ಧಾಳಿಯಾಗಿದೆ. ಶಿಕ್ಷಣಕ್ಕಾಗಿ ಸರಕಾರ ಆಶ್ರಮ ಶಾಲೆಗಳನ್ನು ನಿರ್ಮಿಸಿದ್ದರೂ ಸರಿಯಾದ ಸೌಕರ್ಯಗಳಿಲ್ಲ, ಗುಣಮಟ್ಟದ ಶಿಕ್ಷಣವಿಲ್ಲದೆ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಕೂಲಿಯಾಳುಗಳಾಗಿ ದುಡಿಯುತ್ತಿದ್ದಾರೆ. ಮಹಿಳೆಯರು, ಮಕ್ಕಳು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿದೆ ಎಂದು ತಮ್ಮಯ್ಯ ಆರೋಪಿಸಿದರು.
ಬೇಡಿಕೆಗಳು: ಜಿಲ್ಲಾ ಐ.ಟಿ.ಡಿ.ಪಿ. ಅಧಿಕಾರಿಯನ್ನು ತಕ್ಷಣ ವಜಾಗೊಳಿಸಬೇಕು, ಐದು ವರ್ಷಗಳ ಐ.ಟಿ.ಡಿ.ಪಿ. ಯೋಜನೆಗಳ ಸಮಗ್ರ ತನಿಖೆ ನಡೆಸಬೇಕು, ಬುಡಕಟ್ಟು ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಉಸ್ತುವಾರಿಗಾಗಿ ಬುಡಕಟ್ಟು ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಮಿತಿ ರಚನೆಯಾಗಬೇಕು, ವೀರಾಜಪೇಟೆ ತಾಲೂಕಿನ ದೇವರಪುರ, ಹೆಬ್ಬಾಲೆ ಬುಡಕಟ್ಟು ಹಾಡಿಯಲ್ಲಿರುವ 130 ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು, ಅರುವತ್ತೋಕ್ಲು ಗ್ರಾ.ಪಂ. ವ್ಯಾಪ್ತಿಗೆ ಬರುವ ಹಳ್ಳಿಗಟ್ಟುವಿನಲ್ಲಿರುವ ಬುಡಕಟ್ಟು ಕುಟುಂಬಗಳಿಗೆ ಭೂಮಿ ಮತ್ತು ಸೂಕ್ತ ಪುನರ್ವಸತಿ ವ್ಯವಸ್ಥೆಗಳನ್ನು ಕಲ್ಪಿಸಬೇಕು, ಕೊಡಗು ಜಿಲ್ಲೆಯಾದ್ಯಂತ ಕಾಫಿ ಎಸ್ಟೇಟ್‍ಗಳ ಲೈನ್ ಮನೆಗಳಲ್ಲಿ ವಾಸಿಸುವ ಎಲ್ಲಾ ಬುಡಕಟ್ಟು ಸಮುದಾಯದ ಕುಟುಂಬಗಳನ್ನು ಹೊರತಂದು ಕೃಷಿ ಭೂಮಿ ನೀಡುವದು ಮತ್ತು ಪುನರ್ವಸತಿ ನೀಡಬೇಕು, ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ ಇರುವ ಆಶ್ರಮ ಶಾಲೆಗಳನ್ನು ಕೇರಳ ರಾಜ್ಯದಲ್ಲಿರುವ ನವೋದಯ ಶಾಲೆಗಳ ರೂಪದಲ್ಲಿ ಮೇಲ್ದರ್ಜೆಗೇರಿಸಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ಖಾತ್ರಿಗೊಳಿಸಲಾಗಿರುವ ವೈಯಕ್ತಿಕ ಅರಣ್ಯ ಹಕ್ಕುಪತ್ರ ಹಾಗೂ ಸಮುದಾಯ ಹಕ್ಕುಪತ್ರಗಳನ್ನು ತಕ್ಷಣ ನೀಡಬೇಕು, ನಾಗರಹೊಳೆ ಅಭಯಾರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರೊ. ಮುಜಾಫರ್ ಅಸಾದಿ ವರದಿಯನ್ನು ಅನುಷ್ಠಾನಗೊಳಿಸಬೇಕು, ಕೊಡಗು ಜಿಲ್ಲೆಯ ನಾಕೂರು ಶಿರಂಗಾಲ, ನಂಜರಾಯಪಟ್ಟಣ, ವಾಲ್ನೂರು, ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು, ಗಿರಿಜನ ಉಪಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ತಯಾರಿಸಿ ಅನುಷ್ಠಾನಗೊಳಿಸಬೇಕು, ಗಿರಿಜನ ಉಪಯೋಜನೆಯಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ವಿಶೇಷ ಪಂಚವಾರ್ಷಿಕ ಕ್ರಿಯಾಯೋಜನೆಯನ್ನು ತಯಾರಿಸಬೇಕು, ಈಗಾಗಲೇ ಕರ್ನಾಟಕ ರಾಜ್ಯ ಸರಕಾರದಿಂದ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು, ಕರ್ನಾಟಕ ರಾಜ್ಯದಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳನ್ನು ಅಳಿವಿನಂಚಿನಲ್ಲಿರುವ ಸಮುದಾಯಗಳೆಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡಬೇಕು, ಸರಕಾರದ ಉದ್ಯೋಗಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಎಲ್ಲಾ ರೀತಿಯ ಯೋಜನೆಗಳಲ್ಲಿ ಒಳ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಬುಡಕಟ್ಟು ಮಹಿಳಾ ಸಂಘಟನೆಗಳು ಹಾಗೂ ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ನಾಗರಹೊಳೆ ಬುಡಕಟ್ಟು ಸಂಘದ ಅಧ್ಯಕ್ಷ ದಾಸಪ್ಪ, ಪ್ರಮುಖರಾದ ಪಿ.ಕೆ. ರವಿ, ವೈ.ಕೆ. ಅಪ್ಪಣ್ಣ, ಗಪ್ಪು ಹಾಗೂ ಸೀತೆ ಉಪಸ್ಥಿತರಿದ್ದರು.