ಮಡಿಕೇರಿ, ಮೇ 3: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ ಭಾರತದ ಅಂಚೆ ಇಲಾಖೆ ವಿಶೇಷತೆಗಳನ್ನು ಪ್ರತಿಬಿಂಬಿಸಲು ಹಮ್ಮಿಕೊಂಡಿರುವ ಯೋಜನೆಗಳಲ್ಲಿ ಒಂದಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೊರ ತರಲಾಗುವ ವಿಶೇಷ ಅಂಚೆ ಲಕೋಟೆಯಲ್ಲಿ ಶಾಂತೆಯಂಡ ಒಕ್ಕಡ ಹಾಕಿ ನಮ್ಮೆ-2016 ಸ್ಥಾನ ಪಡೆದಿದೆ.

ಶಾಂತೆಯಂಡ ಕಪ್ ಹಾಕಿ ಉತ್ಸವ ಸಮಿತಿ, ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿದ್ದು 20 ವರ್ಷಗಳ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅಂಚೆ ಇಲಾಖೆ ವತಿಯಿಂದ ಈ ವಿಶೇಷ ಅಂಚೆ ಲಕೋಟೆಯನ್ನು ಹೊರತರಲಾಗಿದೆ. ಈ ಮೂಲಕ ಅಂಚೆ ಇಲಾಖೆ ಹಾಕಿಗೂ ಪ್ರಾಮುಖ್ಯತೆ ನೀಡಿದಂತಾಗಿದ್ದು, ಕೊಡಗಿಗೆ ಹಾಕಿ ಇಂಡಿಯಾ ರಾಷ್ಟ್ರೀಯ ಮಾನ್ಯತೆ ನೀಡಿರುವದಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ. ಮಾತ್ರವಲ್ಲದೆ ದಾಖಲೆಯಲ್ಲಿ ಶಾಂತೆಯಂಡ ಹಾಕಿ ಸ್ಮರಣೀಯವಾಗಿರಲಿದೆ.

ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಶಾಂತೆಯಂಡ ಕಪ್ ಹಾಕಿ ಉತ್ಸವದ ಮುಖ್ಯ ವೇದಿಕೆಯಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆಕರ್ಷಕ ವಿನ್ಯಾಸದ, ಹಾಕಿಯ ವಿಶೇಷತೆಯ ಮಾಹಿತಿ ಒಳಗೊಂಡಿರುವ ಅಂಚೆ ಲಕೋಟೆಯನ್ನು ಜಿಲ್ಲಾ ಅಂಚೆ ಅಧೀಕ್ಷಕ ಹೆಚ್.ಎಲ್. ನಟರಾಜ್ ಬಿಡುಗಡೆ ಮಾಡಿದರು. ಅಂತರ್ರಾಷ್ಟ್ರೀಯ ಹಾಕಿ ಆಟಗಾರ ವಿ.ಎಸ್. ವಿನಯ್ ವಿಶೇಷ ಆಹ್ವಾನಿತ ರಾಗಿದ್ದರು. ಒನ್ ಮಿಲಿಯನ್ ಹಾಕಿ ಲೆಗ್ಸ್ ವತಿಯಿಂದ ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ಆಗಮಿಸಿರುವ ನೆದರ್ ಲ್ಯಾಂಡ್‍ನ ಮಾಜಿ ಒಲಂಪಿಯನ್ ಎರಿಕ್ ಜೆಜಾಜ್, ಮಾರ್ಟಿನ್ ವ್ಯಾನ್, ರಾಬ್ ವ್ಯಾನ್‍ಸನ್ ಅವರುಗಳು ಈ ವಿಶೇಷ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.

ಶಾಂತೆಯಂಡ ಕಪ್ ಹಾಕಿ ಉತ್ಸವ ಸಮಿತಿ ಪದಾಧಿಕಾರಿಗಳಾದ ರವಿಕುಶಾಲಪ್ಪ, ವೀಣಾ ಅಚ್ಚಯ್ಯ, ಪಟ್ಟು ಬೋಪಯ್ಯ, ನಂಜನಗೂಡು ಅಂಚೆ ಅಧೀಕ್ಷಕ ಶ್ರೀನಿವಾಸ್, ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ದಿನೇಶ್, ಸಿಬ್ಬಂದಿಗಳಾದ ಸತೀಶ್, ದೀಪಕ್, ಅಂಚೆ ಸಹಾಯಕಿ ಸವಿತಾ ಉಪಸ್ಥಿತರಿದ್ದರು.