ಮಡಿಕೇರಿ, ಮೇ 6: ಇತ್ತೀಚೆಗೆ ನಡೆದ ಗೋಣಿಕೊಪ್ಪ ಗ್ರಾ.ಪಂ. ಚುನಾವಣೆ ಸಂದರ್ಭ ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸ್ಥಳೀಯ ಕಾಂಗ್ರೆಸಿಗರು ಆರೋಪಿಸಿದ್ದಾರೆ. ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ರಾಜ್ಯ ಯುವ ಕಾಂಗ್ರೆಸ್‍ನ ಮಾಜಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಟ್ಟಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಣಿಕೊಪ್ಪಲು ಪಂಚಾಯಿತಿ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ತನ್ನ ಚಿಹ್ನೆ ಮತ್ತು ನಾಯಕರ ಭಾವಚಿತ್ರವನ್ನು ಬಳಸಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ವಾರ್ಡ್ ಸಂಖ್ಯೆ 1ರ ಸದಸ್ಯರಾದ ರಾಮಕೃಷ್ಣ, ಸಾವಿತ್ರಿ, ಸೆಲ್ವಿ, 2ನೇ ವಾರ್ಡ್‍ನ ಕುಲ್ಲಚಂಡ ಬೋಪಣ್ಣ ಹಾಗೂ 7ನೇ ವಾರ್ಡ್‍ನ ರತಿ ಅಚ್ಚಪ್ಪ ಅವರುಗಳನ್ನು ಸದಸ್ಯತ್ವದಿಂದ ಅನರ್ಹ ಗೊಳಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯ ಪಕ್ಷ ರಹಿತವಾಗಿ ನಡೆಯಬೇಕೆನ್ನುವ ನಿಯಮವಿದ್ದರೂ ಇದನ್ನು ಉಲ್ಲಂಘಿಸಿದ ಬಿಜೆಪಿ ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವ ಚಿತ್ರವಿರುವ ಕರ ಪತ್ರದ ಮೂಲಕ ಪ್ರಚಾರ ನಡೆಸಿದೆ. ಮತದಾರರಿಗೆ ಆಮಿಷ ಒಡ್ಡಿರುವದಲ್ಲದೆ ಕೋಮು ಭಾವನೆಯನ್ನು ಕೆರಳಿಸಿದೆಯೆಂದು ಅರವಿಂದ್ ಕುಟ್ಟಪ್ಪ ಆರೋಪಿಸಿದರು.
ಈಗಿನ ಆಡಳಿತ ಹೈಟೆಕ್ ಬಸ್ ನಿಲ್ದಾಣ, ಸುಸಜ್ಜಿತ ಮಾರುಕಟ್ಟೆ, ಬಸ್ ತಂಗುದಾಣಗಳ ನವೀಕರಣ, ಸಮರ್ಪಕ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಅರವಿಂದ್ ಕುಟ್ಟಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸೂರ್ಯ, ಲಕ್ಷ್ಮಣ್, ಶರೀಫ್ ಹಾಗೂ ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷೆ ಎಸ್. ಪದ್ಮಿನಿ ಉಪಸ್ಥಿತರಿದ್ದರು.