ವೀರಾಜಪೇಟೆ, ಮೇ 5: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಖಾಸಗಿ ಬಸ್ ನಿಲ್ದಾಣದ ಬಳಿಯ ವಾಹನ ಪಾರ್ಕಿಂಗ್ ಶುಲ್ಕ ಹಾಗೂ ಮೂರ್ನಾಡು ರಸ್ತೆಯಲ್ಲಿರುವ 3 ಹಂದಿ ಮಾಂಸ ಮಳಿಗೆಗಳು ಹಾಗೂ ಸಂತೆ ಶುಲ್ಕ ವಸೂಲಿ ಹರಾಜಿನಿಂದ ಈ ಬಾರಿ ಪಟ್ಟಣ ಪಂಚಾಯಿತಿಗೆ ರೂ. 2,47,700 ಅಧಿಕ ಲಾಭ ಬಂದಿದೆ.
ಕಳೆದ 2015-16ರಲ್ಲಿ ಪಾರ್ಕಿಂಗ್ ಶುಲ್ಕದಿಂದ ರೂ. 68000 ಹಾಗೂ ಹಂದಿ ಮಾಂಸ ಮಳಿಗೆಗಳು, ರೂ. 97,600 ಹಾಗೂ ಸಂತೆ ಸುಂಕ ವಸೂಲಿ ರೂ. 1,06100 ಕ್ಕೆ ಹರಾಜು ಆಗಿದ್ದವು. 2016-17ರಲ್ಲಿ ವಾಹನ ಪೇ ಪಾರ್ಕಿಂಗ್ ಶುಲ್ಕ ರೂ. 2,51000 ಹಂದಿ ಮಾಂಸ ಮಳಿಗೆಗಳು ರೂ. 98,300 ಹಾಗೂ ಸಂತೆ ಸುಂಕ ವಸೂಲಿ ರೂ. 1,70,100ಕ್ಕೆ ಹರಾಜಾಗಿ ಪಟ್ಟಣ ಪಂಚಾಯಿತಿಗೆ ಒಟ್ಟು ರೂ. 5,19,400 ಲಾಭ ಬಂದಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಹರಾಜಿನಲ್ಲಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನೀತಾ, ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.