ಶ್ರೀಮಂಗಲ, ಮೇ 2: ಜಿಲ್ಲೆಯಲ್ಲಿ ಹಿಂದೆಂದೂ ಕಾಣದಷ್ಟು ಬರ ಪರಿಸ್ಥಿತಿಗೆ ರೈತರ ಹೋರಾಟವನ್ನು ಕಡೆಗಣಿಸಿ ಜಿಲ್ಲೆಯ ಮೂಲಕ 440 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆ ಅನುಷ್ಠಾನ ಸಂದರ್ಭ ಲಕ್ಷಾಂತರ ಮರ ಹನನ ಮಾಡಿದ್ದ ದುಷ್ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ ಎಂದು ಜಿಲ್ಲೆಗೆ ಆಗಮಿಸಿದ ರಾಜ್ಯ ಬರ ಪರಿಸ್ಥಿತಿ ಅಧ್ಯಯನ ಸಮಿತಿಯ ಮುಂದೆ ಪ್ರಮುಖರು ಪ್ರಸ್ತಾಪಿಸಿದರು.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ರಾಜ್ಯ ಬರ ಅಧ್ಯಯನ ಸಮಿತಿಯ ಪ್ರಮುಖ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಹಕಾರ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಅವರ ಮುಂದೆ ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಈ ವಿಚಾರವನ್ನು ಪ್ರಸ್ತಾಪಿಸಿ ಇಂತಹ ಯೋಜನೆಗಳಿಂದ ಜಿಲ್ಲೆಯಲ್ಲಿ ಅನಗತ್ಯವಾದ ಮರ ಹನನವಾಗಿ ಪರಿಸರ ನಾಶವಾಗುತ್ತದೆ. ಇದರಿಂದ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿ ಮಳೆ ಕೊರತೆ ಉಂಟಾಗಿದೆ. ಪರಿಸರಕ್ಕೆ ಧಕ್ಕೆ ತರುವಂತಹ ಇಂತಹ ಯೋಜನೆ ಜಿಲ್ಲೆಯಲ್ಲಿ ರೂಪಿಸಬಾರದು. ಹೈಟೆನ್ಷನ್ ಯೋಜನೆಯ ದುಷ್ಪರಿಣಾಮದ ಅರಿವು ಇದ್ದ ರೈತರು ಇದರ ವಿರುದ್ಧ ಹೋರಾಟ ನಡೆಸಿ ತಡೆಯಲು ಪ್ರಯತ್ನಿಸಿದರೂ, ಸರಕಾರ ಈ ಯೋಜನೆಯನ್ನು ಸ್ಥಗಿತಗೊಳಿಸದೆ ಅನುಷ್ಠಾನ ಮಾಡಿತು ಎಂದು ಗಮನ ಸೆಳೆದರು.
ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಕಾಫಿ ತೋಟ ಹಸಿರಾಗಿ ಕಂಡರೂ, ಅದರಲ್ಲಿ ಫಸಲು ಬರಗಾಲಕ್ಕೆ ತುತ್ತಾಗಿ ಶೇ. 70 ರಷ್ಟು ನಷ್ಟವಾಗಿದೆ, ಇಲ್ಲಿನ ಪ್ರಮುಖ ನದಿ ಲಕ್ಷ್ಮಣ ತೀರ್ಥ, ಕೆರೆ – ಕಟ್ಟೆಗಳು ಸಂಪೂರ್ಣ ಬತ್ತಿ ಬರಡಾಗಿದೆ. ಜಿಲ್ಲೆಗೆ ಸೂಕ್ತ ಬರ ಪರಿಹಾರದ ನೆರವು ನೀಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭ ಲಿಖಿತ ಮನವಿ ಪತ್ರ ಸಲ್ಲಿಸಿ, ಸಮಸ್ಯೆ ವಿವರಿಸಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಅವರು ಹೈಟೆನ್ಷನ್ ವಿದ್ಯುತ್ ಮಾರ್ಗ ವಿರೋಧಿಸಿ ರೈತ ಸಂಘದ ನೇತೃತ್ವದ ಹೋರಾಟವನ್ನು ಕಡೆಗಣಿಸಿ ಲಕ್ಷಾಂತರ ಮರ ಹನನ ಮಾಡಿ ಜಿಲ್ಲೆಯ ಮೂಲಕ ಯೋಜನೆ ರೂಪಿಸಲಾಯಿತು. ಇದರಿಂದ ಜಿಲ್ಲೆಯ ತಾಪಮಾನ ಹೆಚ್ಚಾಗಿ ಯೋಜನೆ ಅನುಷ್ಠಾನಗೊಂಡ ತಕ್ಷಣದಿಂದಲೇ ಮಳೆಯ ಪ್ರಮಾಣ ಕುಸಿಯಲು ಕಾರಣವಾಯಿತೆಂದು ಗಮನ ಸೆಳೆದರು. ಇದಲ್ಲದೆ ಬರ ಪರಿಸ್ಥಿತಿ ಜಿಲ್ಲೆಯಲ್ಲಿ ಉಲ್ಭಣಿಸಿದ್ದು, ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಲ್ಲದಂತಾಗಿದೆ. ಭಾರೀ ಪ್ರಮಾಣದಲ್ಲಿ ಕಾಫಿ, ಕರಿಮೆಣಸು, ಅಡಿಕೆ ಫಸಲು ನಷ್ಟವಾಗಿದ್ದು, ಸೂಕ್ತ ನೆರವು ಒದಗಿಸಲು ಮನವಿ ಮಾಡಿದರು.
ವೇದಿಕೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಕೆ.ಪಿ.ಸಿ.ಸಿ. ಮುಖಂಡ ಮಿಟ್ಟು ಚಂಗಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜೆ.ಎ. ಕರುಂಬಯ್ಯ, ಜಿ.ಪಂ. ಸದಸ್ಯ ಶಿವುಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾ.ಪಂ. ಸದಸ್ಯ ಪಲ್ವಿನ್, ಗ್ರಾ.ಪಂ. ಸದಸ್ಯರಾದ ಕುಲ್ಲಚಂಡ ಗಣಪತಿ, ಬಿ.ಎನ್. ಪ್ರಕಾಶ್, ರೈತ ಸಂಘದ ಕಳ್ಳಿಚಂಡ ಧನು, ಚಟ್ರುಮಾಡ ಸುಜಯ್ ಬೋಪಯ್ಯ ಮತ್ತಿತರರು ಹಾಜರಿದ್ದರು.