ಸಿದ್ದಾಪುರ, ಏ. 30: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ರಸ್ತೆ ದುರಸ್ತಿಪಡಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮೇ 3 ರಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡಿಗೋಡು ಗ್ರಾಮದಲ್ಲಿ 450ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿದ್ದು, ಈ ಭಾಗದ ರಸ್ತೆಗಳು ಹದಗೆಟ್ಟು ವರ್ಷವಾದರೂ ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿಗಳು ರಸ್ತೆ ದುರಸ್ತಿಯ ಬಗ್ಗೆ ಕಾಳಜಿವಹಿಸದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕುಟ್ಟಪ್ಪ ಅವರು ಕರಡಿಗೋಡು ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವಾಹನ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಕಷ್ಟವಾಗಿದೆ. ಕರಡಿಗೋಡು ಗ್ರಾಮದಲ್ಲಿ ಅಧ್ಯಕ್ಷರು ಸೇರಿದಂತೆ 8 ಮಂದಿ ಸದಸ್ಯರುಗಳು ಆಯ್ಕೆಯಾಗಿದ್ದರೂ ಕೂಡ ಚುನಾವಣೆ ಸಂದರ್ಭ ನೀಡಿದ ಭರವಸೆಗಳನ್ನು ಈಡೇರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವದೇ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿ ಆಡಳಿತ ಮಂಡಳಿ ಒದಗಿಸಿಕೊಡದೆ ಪಿ.ಡಿ.ಓ. ಹಾಗೂ ಅಧ್ಯಕ್ಷರ ಮಾರಾಮಾರಿ ವಿಚಾರವನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಪರ ಚಿಂತನೆ ಮಾಡದೇ ದಿನ ದೂಡುತ್ತಿದ್ದಾರೆ ಎಂದು ಆರೋಪಿಸಿದರು.
ಡಿ.ವೈ.ಎಫ್.ಐ. ಗ್ರಾಮ ಸಮಿತಿ ಸದಸ್ಯ ಬೈಜು ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆಯನ್ನು ನಡೆಸದೇ ಏಕಾಏಕಿ ಗ್ರಾಮ ಸಭೆಯನ್ನು ನಡೆಸಿರುವ ಕ್ರಮ ಸಮಂಜಸವಲ್ಲ. ಕರಡಿಗೋಡು ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದರೂ ಈ ಬಗ್ಗೆ ಆಸಕ್ತಿವಹಿಸದೇ ತಮಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಗ್ರಾಮ ಪಂಚಾಯಿತಿ ಸದಸ್ಯ ಎಂ.ಎ. ಕೃಷ್ಣ ಮಾತನಾಡಿ, ಕರಡಿಗೋಡು ಭಾಗದಿಂದ ಆಯ್ಕೆಯಾದ ಸದಸ್ಯರು ಗೆಲವು ಸಾಧಿಸಿದ ಸಂದರ್ಭ ಪಟಾಕಿ ಸಿಡಿಸಿ ತೆರಳಿದವರು ಬಳಿಕ ಗ್ರಾಮದ ಕಡೆ ತಲೆ ಹಾಕಲಿಲ್ಲ ಎಂದು ವ್ಯಂಗ್ಯವಾಡಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಮುಸ್ತಫಾ, ಮುತ್ತುರಾಜ್, ಶೀಜು ಇನ್ನಿತರರು ಹಾಜರಿದ್ದರು.