ನಾಪೋಕ್ಲು,: ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಮಾಲೆ (ಜಾಂಡೀಸ್) ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟವರು ಇದೀಗ ಎಚ್ಚೆತ್ತುಕೊಂಡಿರುವದು ಊರು ಕೊಳ್ಳೆ ಹೊಡೆದ ಮೇಲೆ ದಿಂಡಿ ಬಾಗಿಲು ಮುಚ್ಚಿದಂತಾಗಿದೆ.ನಾಪೋಕ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಇದುವರೆಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಮುಂದಾಗದೆ ನೇರವಾಗಿ ಕಾವೇರಿ ನದಿಯಿಂದ ಪಂಪ್ ಮೂಲಕ ಇಂದಿರಾ ನಗರದಲಿರುವ ನೀರಿನ ಟ್ಯಾಂಕ್‍ಗಳಲ್ಲಿ ಸಂಗ್ರಹಿಸಿದ ಬಳಿಕ ಶುದ್ಧೀಕರಿಸದೆ ಸರಬರಾಜು ಮಾಡಲಾಗುತ್ತಿರುವದು ಎಷ್ಟು ಸರಿ? ಇದರಿಂದಾಗಿ ಗ್ರಾಮದಲ್ಲಿ ಕಾಯಿಲೆಗಳು ಹೆಚ್ಚಾಗಲು ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸ್ವಚ್ಛತಾ ಆಂದೋಲನದ ಮೂಲಕ ಪರಿಸರ, ನದಿ ಕೆರೆ, ಸ್ವಚ್ಛತೆ ಮಾಡಿ ಪರಿಸರ ಜಾಗೃತಿ ಅಭಿಯಾನದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಮಾಡುವದು ಒಂದು ಕಡೆಯಾದರೆ, ವಿವಿಧ ಯೋಜನೆಗಳನ್ನು ರೂಪಿಸಿ ಸಾರ್ವಜನಿಕರ ಮೂಲಭೂತ ಸೌಕರ್ಯದಲ್ಲಿ ಒಂದಾದ ಶುದ್ಧ ಕುಡಿಯುವ ನೀರಿಗೆ ಸರ್ಕಾರ ಪ್ರತಿ ವರ್ಷ ಲಕ್ಷಾಂತರ ರೂ. ವ್ಯಯಿಸುತ್ತಿದ್ದು, ಪ್ರಯೋಜನ ವಾಗುತ್ತಿಲ್ಲ. ಪರಿಣಾಮ ಗ್ರಾಮೀಣ ಪ್ರದೇಶವಾದ ನಾಪೋಕ್ಲು ಸುತ್ತಮುತ್ತ ಇದೀಗ ಕಾಮಾಲೆ(ಜಾಂಡೀಸ್) ರೋಗ ಹರಡಲು ಮೂಲ ಕಾರಣವಾಗುತ್ತಿದ್ದು, ಸಾರ್ವಜನಿಕರು ಹೋರಾಟದ ಮೂಲಕ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡದೆ ಇನ್ನಾದರೂ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಕೂಡಲೇ ನೂತನ ಶುದ್ಧೀಕರಣ ಘಟಕ ಸ್ಥಾಪಿಸಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸುವದೇ ಎಂದು ಕಾದು ನೋಡಬೇಕಿದೆ.