ಮಡಿಕೇರಿ, ಫೆ.3 : ಹೊದ್ದೂರು ಪಾಲೇಮಾಡು ವ್ಯಾಪ್ತಿಯಲ್ಲಿ ಕೆಲವರು ಕ್ರಿಕೆಟ್ ಕ್ರೀಡಾಂಗಣದ ಜಾಗದಲ್ಲೇ ಸ್ಮಶಾನಕ್ಕೆ ಜಾಗ ನೀಡಬೇಕೆಂದು ಒತ್ತಡ ಹೇರುತ್ತಿದ್ದು, ಯಾವದೇ ಕಾರಣಕ್ಕೂ ಜಿಲ್ಲಾಡಳಿತ ಕ್ರೀಡಾಂಗಣಕ್ಕೆ ಮೀಸಲಾದ 12.70 ಏಕರೆ ಪ್ರದೇಶದಲ್ಲಿ ಸ್ಮಶಾನಕ್ಕೆ ಜಾಗ ನೀಡಬಾರದೆಂದು ಹೊದ್ದೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖರು ಹಾಗೂ ಎಪಿಎಂಸಿ ಸದಸ್ಯ ವಾಂಚೀರ ಜಯಾ ನಂಜಪ್ಪ, ಸ್ಟೇಡಿಯಂ ನಿರ್ಮಾಣದ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದೆಂದರು. ಈಗಾಗಲೇ ಹೊದ್ದೂರು ಪಾಲೆÉೀಮಾಡು ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆ ಕಂಡುಕೊಂಡವರಿಗೆ ನವಗ್ರಾಮ ಯೋಜನೆಯಡಿ 4 ಏಕರೆ ಭೂಮಿಯನ್ನು ಮೀಸಲಿಡಲಾಗಿದೆ. ಅಲ್ಲದೆ, ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗವನ್ನು ಕೂಡ ಗುರುತಿಸಲಾಗಿದೆ. ಆದರೆ, ಕ್ರೀಡಾಂಗಣ ನಿರ್ಮಾಣದ ಜಾಗದಲ್ಲೇ ಸ್ಮಶಾನಕ್ಕೆ ಜಾಗ ಬೇಕೆಂದು ಒತ್ತಡ ಹೇರುವದು ಸರಿಯಾದ ಕ್ರಮವಲ್ಲವೆಂದರು.

ಗ್ರಾಮದಲ್ಲಿ ಅಕ್ರಮವಾಗಿ ಆಶ್ರಯ ಪಡೆದವರು, ಅಕ್ರಮವಾಗಿ ಕೆಲವು ಶವಗಳನ್ನು ಸಂಸ್ಕಾರ ಮಾಡಿದ್ದಾರೆ. ಇದೀಗ 12.70 ಎಕರೆ ಭೂಮಿಯನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಅಧಿಕೃತವಾಗಿ ನೀಡಲಾಗಿದೆ. ಇದೇ ಪ್ರದೇಶದಲ್ಲಿ ಸ್ಮಶಾನ ಬೇಕೆಂದು ಒತ್ತಡ ಹೇರುವದನ್ನು ಗ್ರಾಮಸ್ಥರು ಖಂಡಿಸುವದಾಗಿ ಜಯಾ ನಂಜಪ್ಪ ತಿಳಿಸಿದರು. ಯಾವದೇ ಕಾರಣಕ್ಕೂ ಈ ವಿವಾದದಲ್ಲಿ ಜಾತಿ ದ್ವೇಷ ಮಾಡುತ್ತಿಲ್ಲ. ಕ್ರಿಕೆಟ್ ಪಂದ್ಯಕ್ಕೆ ಯಾವದೇ ಜಾತಿ ಇಲ್ಲ. ಇಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ, ಗ್ರಾಮಕ್ಕೊಂದು ಹೆಮ್ಮೆಯ ವಿಚಾರ ವಲ್ಲದೆ, ಸ್ಥಳೀಯರು ಕ್ರೀಡಾಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದೆಂದು ಅವರು ಅಭಿಪ್ರಾಯಪಟ್ಟರು.

ಯಾರೊಂದಿಗೂ ಗ್ರಾಮಸ್ಥರು ಅಕ್ರಮ ಒತ್ತುವರಿ ವಿಚಾರದಲ್ಲಿ ದ್ವೇಷ ಸಾಧಿಸುತ್ತಿಲ್ಲ. ಆದರೆ, ಕ್ರೀಡಾಂಗಣಕ್ಕೆ ಮೀಸಲಿಟ್ಟ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ನೀಡಬಾರದೆಂದಷ್ಟೆ ಒತ್ತಾಯಿಸುತ್ತಿದ್ದೇವೆ ಎಂದು ಜಯಾ ನಂಜಪ್ಪ ಸ್ಪಷ್ಟಪಡಿಸಿದರು.

ಕೆಲವರು ಹೇಳುವಂತೆ ಈ ಪ್ರದೇಶದಲ್ಲಿ 39 ಶವಗಳನ್ನು ಸಂಸ್ಕಾರ ಮಾಡಿಲ್ಲವೆಂದ ಅವರು, ಕೆಲವು ಶವಗಳನ್ನಷ್ಟೆ ಸಂಸ್ಕಾರ ಮಾಡಿರ ಬಹುದೆಂದರು. ಜಾಗದ ವಿವಾದದ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, 12.70 ಏಕರೆ ಪ್ರದೇಶದಲ್ಲಿ ಸ್ಮಶಾನಕ್ಕೆ ಅವಕಾಶ ನೀಡ ಬಾರದೆಂದು ಒತ್ತಾಯಿಸಿರುವದಾಗಿ ತಿಳಿಸಿದರು. ಗ್ರಾಮ ಪಂಚಾಯ್ತಿ ನಿಲುವು ಕೂಡ ಇದೇ ಆಗಿದ್ದು, ಈ ಹಿಂದೆ ವಿಧವೆಯರು, ಅಂಗವಿಕಲರು, ವಯೋವೃದ್ಧರು ಹಾಗೂ ಮಾಜಿ ಸೈನಿಕರಿಗೆ ಹೊದ್ದೂರಿನಲ್ಲಿರುವ ಪೈಸಾರಿ ಜಾಗವನ್ನು ಹಂಚಬೇಕೆನ್ನುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಹೊರಗಿನವರು ಬಂದು ಇಲ್ಲಿ ಅಕ್ರಮವಾಗಿ ನೆಲೆ ಕಂಡುಕೊಂಡಿದ್ದಾರೆ ಎಂದು ಜಯಾ ನಂಜಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ನೆರವಂಡ ರಘು ದೇವಯ್ಯ, ಗ್ರಾಮದ ಪ್ರಮುಖರಾದ ಸಿ.ಎಸ್. ಉತ್ತಪ್ಪ, ನೆರವಂಡ ನಂಜಪ್ಪ, ಚೌರೀರ ಉದಯ ಹಾಗೂ ಚೌರೀರ ಚಿಣ್ಣಪ್ಪ ಉಪಸ್ಥಿತರಿದ್ದರು.