ಗುಡ್ಡೆಹೊಸೂರು, ಫೆ. 3: ಇಲ್ಲಿನ ಬಸವನಹಳ್ಳಿಯ 6 ಏಕರೆ 70 ಸೆಂಟ್ ಜಾಗವನ್ನು ಡಿಡ್ಡಳ್ಳಿ ಗಿರಿಜನರಿಗೆ ನೀಡಲು ಸರಕಾರ ಮುಂದಾಗಿದ್ದು ಈ ಜಾಗದಲ್ಲಿ ಬಸವನಹಳ್ಳಿ ಹಾಗೂ ಸುತ್ತಮುತ್ತಲಿನ ಹೊಸಕಾಡು, ಬಸವನಹಳ್ಳಿಯಲ್ಲಿರುವ ವಸತಿ ವಂಚಿತರಿಗೆ ಮತ್ತು ಸ್ಥಳೀಯರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಲ್ಯಾಂಪ್ ಸೊಸೈಟಿ ಹಾಗೂ ಸುಮಾರು 50 ಮಂದಿ ಗ್ರಾಮಸ್ಥರು ಪ್ರತ್ಯೇಕವಾಗಿ ಸಹಿ ಮಾಡಿದ ಮನವಿ ಪತ್ರ ಸಲ್ಲಿಸಲಾಯಿತು.

ಅಲ್ಲದೆ ಬಸವನಹಳ್ಳಿಯಲ್ಲಿ ಆಶ್ರಮ ಶಾಲೆ, ಮೊರಾರ್ಜಿ ದೇಸಾಯಿ ಶಾಲೆ ಮತ್ತು ಸ.ಪ್ರೌಢಶಾಲೆ ಇದ್ದು, ಇಲ್ಲಿ ಎಲ್ಲರ ಉಪಯೋಗ ಕ್ಕಾಗಿ ಉದ್ದೇಶಿತ ಜಾಗದಲ್ಲಿ ಕಾಲೇಜು ಸ್ಥಾಪನೆಯಾಗಬೇಕು ಎಂಬದು ಸಾರ್ವಜನಿಕರ ಒತ್ತಾಸೆಯಾಗಿದೆ. ಡಿಡ್ಡಳ್ಳಿ ಗಿರಿಜನರಿಗೆ ನೀಡುವ ಬದಲು ಸ್ಥಳೀಯ ಸೋಲಿಗ, ಬೆಟ್ಟಕುರುಬ (ಕಾಡುಕುರುಬ) ಆನೆಕಾಡಿನ ಜೇನುಕುರುಬ ಮತ್ತು ಮೇದ ಕುಟುಂಬಗಳಿಗೆ ನೀಡುವಂತೆ ಈ ಸಂದರ್ಭ ಮನವಿಯಲ್ಲಿ ಆಗ್ರಹಿಸಲಾಗಿದೆ.

ಇತರೆಡೆಯ ನಿವಾಸಿಗಳಿಗೆ ಇಲ್ಲಿ ನೆಲೆ ನೀಡಲು ಮುಂದಾದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಬಸವನಹಳ್ಳಿಯ ಗಿರಿಜನ ಮುಖಂಡ ಸಿದ್ದಲಿಂಗ, ಸೋಲಿಗ ಸಂಘದ ಅಧ್ಯಕ್ಷ ಬಿ.ಸಿ. ಶಿವಣ್ಣ, ಲ್ಯಾಂಪ್ ಸಹಕಾರ ಸಂಘದ ನಿರ್ದೆಶಕ ಬಿ.ಕೆ. ಮೋಹನ, ಗ್ರಾಮ ಅರಣ್ಯ ಸಮಿತಿಯ ಸುನೀಲ್ ನಾಗೇಂದ್ರ, ಸುರೇಶ್ ಬಿ.ಎಸ್, ಸುಬ್ರಮಣಿ ಮುಂತಾದವರು ತಿಳಿಸಿದ್ದಾರೆ. ಈ ಸಂದರ್ಭ ಗ್ರಾ.ಪಂ. ಅಧ್ಯಕೆÀ್ಷ ಭಾರತಿ ಪಿ.ಡಿ.ಓ. ವೇಣುಗೋಪಾಲ್, ಗ್ರಾ.ಪಂ. ಸದಸ್ಯರಾದ ಕಾವೇರಪ್ಪ, ಬಿ.ಟಿ. ಪ್ರಸನ್ನ ಮುಂತಾದವರು ಹಾಜರಿದ್ದರು.