ಕುಶಾಲನಗರ, ಫೆ. 3 : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ತಾ.9 ರಿಂದ ಎರಡು ದಿನಗಳ ಕಾಲ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷÀ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ.ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮ್ಮೇಳನದ ಅಧ್ಯಕ್ಷರಾಗಿ ಮಕ್ಕಳನ್ನೇ ಆಯ್ಕೆಗೊಳಿಸುವ ನಿಟ್ಟಿನಲ್ಲಿ ಪರಿಷತ್ತಿನ ಮಹಾಪೋಷಕರಾದ ಶಂಭುನಾಥ ಮಹಾಸ್ವಾಮೀಜಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಲ್.ನಾಗರಾಜು ಹಾಗೂ ಆಯ್ಕೆ ಸಮಿತಿ ಮುಂದಾಳತ್ವದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡಿದ್ದ ಸುಮಾರು 200 ಮಕ್ಕಳ ಪೈಕಿ ಪ್ರತಿಭಾನ್ವಿತರಾಗಿರುವ 35 ಮಕ್ಕಳನ್ನು ಆರಿಸಿ ಅವರಲ್ಲಿ ಮೊದಲಿಗರಾದ ಕು.ಭಾರ್ಗವಿ ಅವರನ್ನು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಳಿಸಲಾಗಿದೆ. ಉಳಿದ ವಿದ್ಯಾರ್ಥಿಗಳನ್ನು ಸಮ್ಮೇಳನದ ಪದಾಧಿಕಾರಿಗಳು ಹಾಗೂ ವಿವಿಧ ಗೋಷ್ಠಿಗಳ ನಿರೂಪಕರಾಗಿ ಆಯ್ಕೆಗೊಳಿಸಿ ತರಬೇತಿ ನೀಡಲಾಗುತ್ತಿದೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.