ಸುಂಟಿಕೊಪ್ಪ, ಫೆ. 3 : ಗ್ರಾಮಸ್ಥರಿಗೆ ಕುಡಿಯುವ ನೀರಿನ ಮಹತ್ವಾಕಾಂಕ್ಷೆ ಯೋಜನೆಯಡಿ ರೂ. 90 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಮಗಾರಿ ಕಳಪೆಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಬದಲು ಕಲುಷಿತ ನೀರು ಕುಡಿಸುತ್ತಿದ್ದಾರೆ ಎಂದು ಹರದೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಹರದೂರು ಗ್ರಾಮ ಪಂಚಾಯಿತಿಯ 2ನೇ ಹಂತದ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ಕೆ.ಸಿ.ಶೈಲಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮಸ್ಥರಾದ ಮುಸ್ತಫಾ, ರಜಾಕ್, ರಮೇಶ, ಸುರೇಶ ಮಾತನಾಡಿ, ಬಹಳಷ್ಟು ಗ್ರಾಮಸಭೆ ನೋಡಿದ್ದೇವೆ ಕೇವಲ ಭರವಸೆ ನೀಡಿ ಹೋಗುತ್ತಾರೆ. ಗ್ರಾಮಸ್ಥರ ಯಾವದೇ ಬೇಡಿಕೆ ಈಡೇರುವದಿಲ್ಲ ನಮಗೆ ಮೊದಲು ಕುಡಿಯಲು ನೀರುಕೊಡಿ ಆಮೇಲೆ ಸಭೆ ಆರಂಭಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ನೆರೆದಿದ್ದ ಗ್ರಾಮಸ್ಥರು ಧ್ವನಿಗೂಡಿಸಿದರು.

ಕಲುಷಿತ ನೀರು ಸೇವಿಸಿ ಖಾಯಿಲೆ ಬಂದಿದೆ: ಹರದೂರು ಗ್ರಾಮ ಪಂಚಾಯಿತಿಗೆ 2013-14 ನೇ ಸಾಲಿನಲ್ಲಿ ಕುಡಿಯುವ ನೀರು ಕಾಮಗಾರಿಗೆ ಜಿ.ಪಂ.ನಿಂದ 2 ಹಂತದಲ್ಲಿ ತಲಾ ರೂ. 45 ಲಕ್ಷದಂತೆ 90 ಲಕ್ಷ ಬಿಡುಗಡೆಯಾಗಿದ್ದು ಕಳಪೆ ಪೈಪ್ ಅಳವಡಿಸಿರುವದರಿಂದ ಆಗಾಗ್ಗೆ ಪೈಪ್‍ಗಳು ನೀರಿನ ಒತ್ತಡದಿಂದ ಜೋಡಣೆಗಳು ಬಿಟ್ಟು ಹೋಗುತ್ತಿದೆ. ಶುದ್ಧ ನೀರು ಕೊಡುತ್ತೇವೆಂದು ಕಲುಷಿತ ನೀರು ನೀಡುತ್ತಿದ್ದಾರೆ ಇದರಿಂದ ಮಕ್ಕಳು ಸೇರಿದಂತೆ ವೃದ್ಧರು ಆಸ್ಪತ್ರೆ ಸೇರಿದ್ದಾರೆ 20 ದಿನದಿಂದ ನಲ್ಲಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಕುಡಿಯುವ ನೀರು ಒದಗಿಸಿದ ಮೇಲೆ ಈ ಗ್ರಾಮಸಭೆ ಯಾರ ಉಪಯೋಗಕ್ಕೆ ಸಭೆ ನಡೆಸಲು ಬಿಡುವದಿಲ್ಲವೆಂದು ವಾಗ್ಧಾಳಿ ನಡೆಸಿದರು.

ಜಿ.ಪಂ.ಸದಸ್ಯೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸಿ.ಶೈಲಜಾ ಅವರು ಜಿ.ಪಂ.ಅಭಿಯಂತರರಾದ ವೀರೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಭೆಗೆ ಬರುವಂತೆ ಆಹ್ವಾನಿಸಿದರೂ ಗ್ರಾಮಸ್ಥರು ಅವರು ಬಂದ ನಂತರ ಸಭೆ ನಡೆಸಿದರೆ ಸಾಕೆಂದು ಪಟ್ಟು ಹಿಡಿದರು. ಅಪರಾಹ್ನ 1 ಗಂಟೆಗೆ ಸಭೆಗೆ ಬಂದ ಇಂಜಿನಿಯರ್ ಶುದ್ಧ ನೀರು ಬರುತ್ತಿಲ್ಲವೆಂದು ತನಗೆ ಯಾರು ತಿಳಿಸಿಲ್ಲ. ಕಾಮಗಾರಿ ಉತ್ತಮವಾಗಿದೆ. ಗುಣ ಮಟ್ಟದ ಪೈಪ್‍ಗಳನ್ನು ಅಳವಡಿಸಲಾಗಿದೆ ಪಂಚಾಯಿತಿ ಸುಪರ್ದಿಗೆ ಕುಡಿಯುವ ನೀರಿನ ನಿರ್ವಹಣೆ ವಹಿಸಲಾಗಿದೆ ಕಲುಷಿತ ನೀರನ್ನು ಇಂದು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಪರಿಶೀಲಿಸಿ ವರದಿ ನೀಡುತ್ತೇನೆ ಎಂದು ಹೇಳಿದರು.

ಗ್ರಾಮಸ್ಥರು ಅಭಿಯಂತರರ ಮಾತಿನಿಂದ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ. ಅಧ್ಯಕ್ಷರು ಕುಡಿಯುವ ನೀರಿನ ನಿರ್ವಹಣೆ ಜಿ.ಪಂ.ಇಂಜಿನಿಯರ್ ಪಂಚಾಯಿತಿಗೆ ಒಪ್ಪಿಸಿಲ್ಲ ಎಂದು ಹೇಳುತ್ತಾರೆ. ನೀವು ಒಪ್ಪಿಸಿದ್ದೀನಿ ಎನ್ನುತ್ತೀರಾ ಯಾರನ್ನು ನಂಬವದು ನಮಗೆ ಕುಡಿಯುವ ನೀರು ಸಿಗುತ್ತಿಲ್ಲ ನಾಳೆಯಿಂದ ಶುದ್ಧ ನೀರು ಒದಗಿಸಿ ಕೊಡುವಂತೆ ಆಗ್ರಹಿಸಿದರು.

ರಾಜಪ್ರಭಾ ಪೈಸಾರಿ ವಿಭಾಗದಲ್ಲಿ ಆಗಾಗ್ಗೆ ಪೈಪ್‍ಗಳು ಒಡೆದು ಹೋಗುತ್ತಿದ್ದು ನೀರು ಸಿಗುತ್ತಿಲ್ಲ ಒಟ್ಟಾರೆ 90 ಲಕ್ಷ ರೂ ಕುಡಿಯುವ ನೀರಿನ ಯೋಜನೆ ನಿಷ್ಕ್ರಿಯೋಜಕ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಮಾತನಾಡಿ ಹರದೂರು ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರನ್ನು ಕೂರಿಸಿ ಪ್ರತ್ಯೇಕ ಸಭೆ ನಡೆಸಿ ಈ ಗ್ರಾಮದ ಬೇಕು ಬೇಡಿಕೆಗಳನ್ನು ಕ್ರೂಢೀಕರಿಸಿ ಜಿ.ಪಂ.ನಿಂದ ಆಗುವ ಕೆಲಸಗಳನ್ನು ಮಾಡಿಕೊಡುತ್ತೇನೆಂದು ಭರವಸೆ ನೀಡಿದರು.

ವಸತಿ ರಹಿತ ಫಲಾನುಭವಿ ಗಳಿಂದ ಅರ್ಜಿ ಸ್ವೀಕರಿಸುತ್ತೀರಾ ಆದರೆ ಮನೆ ನಿರ್ಮಿಸಿ ಕೊಡುವ ಕೆಲಸ ಆಗುತ್ತಿಲ್ಲವೆಂದು ರಮೇಶ, ಸುರೇಶ ಆರೋಪಿಸಿದರು.

ಗ್ರಾಮ ಸಭೆಯಲ್ಲಿ ತಾ.ಪಂ.ಸದಸ್ಯೆ ಮಣಿ, ನೊಡಲ್ ಅಧಿಕಾರಿ ತಾ.ಪಂ.ಸಹಾಯಕ ಲೆಕ್ಕಾಧಿಕಾರಿ ನಾಗಾರಾಜಾಚಾರಿ, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವನ, ಗ್ರಾ.ಪಂ. ಸದಸ್ಯರುಗಳಾದ ಎ.ಸಿ.ಸುಬ್ಬಯ್ಯ, ಪರಮೇಶ, ಗೌತಮ್ ಶಿವಪ್ಪ, ಎಂ.ಪಿ.ದೇವಪ್ಪ, ಸುಮಾ, ಕಾವೇರಿ, ಪೌಶಿಯಾ, ಗಂಗೆ ಪಿಡಿಓ ರಾಜಶೇಖರ, ಸುಂಟಿಕೊಪ್ಪ ನಾಡು ಕಚೇರಿ ಪ್ರಬಾರ ರೆವಿನ್ಯೂ ಇನ್ಸ್‍ಪೆಕ್ಟರ್ ನಾಗೇಶ್‍ರಾವ್, ಸೆಸ್ಕ್ ಇಂಜಿನೀಯರ್ ರಮೇಶ, ಆರೋಗ್ಯ ಸಹಾಯಕ ಅಧಿಕಾರಿ ಗೋವಿಂದ ರಾಜ್ ಹಾಜರಿದ್ದರು.