ಸಿದ್ದಾಪುರ, ಫೆ. 3: ಕಾಂಗ್ರೆಸ್ ಪಕ್ಷದ ಸ್ಥಿತಿಯ ಬಗ್ಗೆ ಹೇಳಿಕೆ ನೀಡಿರುವ ಬಿ.ಜೆ.ಪಿ. ಮೊದಲು ತಮ್ಮ ಸ್ಥಿತಿಯನ್ನು ಸರಿಪಡಿಸಿಕೊಳ್ಳಲಿ ಎಂದು ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ವಿ.ಕೆ. ಬಷೀರ್‍ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಸಿದ್ದಾಪುರದ ಕಾಂಗ್ರೆಸ್ ಪಕ್ಷದ ಸ್ಥಿತಿ ಶೋಚನೀಯವಾಗಿದೆ ಎಂದು ಸಿದ್ದಾಪುರ ಬಿ.ಜೆ.ಪಿ. ಪಕ್ಷದ ಕೆಲ ನಾಯಕರು ಹೇಳಿಕೆಯನ್ನು ನೀಡಿದ್ದಾರೆ. 25 ಸದಸ್ಯ ಬಲ ಹೊಂದಿರುವ ಸಿದ್ದಾಪುರ ಗ್ರಾ.ಪಂ.ನಲ್ಲಿ ಒಂದೇ ಒಂದು ಸದಸ್ಯರನ್ನು ಹೊಂದದೆ, ಹೀನಾಯವಾಗಿ ಸೋಲುಂಡು ಬಿ.ಜೆ.ಪಿ. ಶೋಚನೀಯ ಸ್ಥಿತಿಯಲ್ಲಿದೆ ಎಂದು ವ್ಯಂಗÀ್ಯವಾಡಿದ ಅವರು, ಸಿದ್ದಾಪುರ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಪಕ್ಷದ ವಿಚಾರದಲ್ಲಿ ಮೂಗುತೂರಿಸುವ ಅಗತ್ಯ ಬಿ.ಜೆ.ಪಿ. ಪಕ್ಷಕ್ಕಿಲ್ಲ. ಮೊದಲು ತಮ್ಮ ಪಕ್ಷದ ಗುಂಪುಗಾರಿಕೆಯನ್ನು ಸರಿಪಡಿಸಿ, ತದನಂತರ ಪುಕ್ಕಟೆ ಸಲಹೆ ನೀಡಲಿ ಎಂದು ತಿಳಿಸಿದ್ದಾರೆ.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್ ಅವರು ಜಿ.ಪಂ. ಸದಸ್ಯರಾಗಿದ್ದ ಸಂದರ್ಭ ಸಿದ್ದಾಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಅವರ ವಿರುದ್ಧ ಬಾಲಿಶ ಹೇಳಿಕೆ ನೀಡಿ, ಅವರನ್ನು ತೇಜೋವದೆ ಮಾಡಲು ಮುಂದಾಗಿರುವದು ಖಂಡನೀಯ. ಕಾಂಗ್ರೆಸ್ ಪಕ್ಷದ ಸದಸ್ಯರು ವೆಂಕಟೇಶ್ ಅವರ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ಕಪೋಲಕಲ್ಪಿತ ವರದಿಯಾಗಿದ್ದು, ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಎಂ.ಎಸ್ ವೆಂಕಟೇಶ್ ಅವರು ಸಿದ್ದಾಪುರ ಭಾಗದಲ್ಲಿ ಪಕ್ಷವನ್ನು ಸಂಘಟಿಸಿ ಮುನ್ನಡೆಸುತ್ತಿರುವದನ್ನು ಸಹಿಸದ ಕೆಲವರು ಈ ರೀತಿಯ ಪಿತೂರಿಯನ್ನು ನಡೆಸುತ್ತಿದ್ದಾರೆ. ಎಲ್ಲಾ ಚುನಾವಣೆಗಳಲ್ಲೂ ಸಿದ್ದಾಪುರದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಮತವನ್ನು ಪಡೆಯುತ್ತಿದ್ದು, ಇದರ ಹಿಂದೆ ವೆಂಕಟೇಶ್ ಅವರ ಪರಿಶ್ರಮ ಹೆಚ್ಚಿದೆ ಎಂದರು.

ಬಿ.ಜೆ.ಪಿ. ಪಕ್ಷಕ್ಕೆ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವಾಗಿದ್ದು, ಬಿ.ಜೆ.ಪಿ. ಶಾಸಕರು, ಸಂಸದರು, ಎಂ.ಎಲ್.ಸಿ. ಹಾಗೂ ಸ್ಥಳೀಯ ತಾ.ಪಂ. ಸದಸ್ಯ ಜನೀಶ್ ಕಸದ ವಿಲೇವಾರಿ ವಿಷಯದಲ್ಲಿ ಎಷ್ಟು ಕಾಳಜಿ ವಹಿಸಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಸವಾಲೊಡ್ಡಿದ ಅವರು ಕಸದ ವಿಲೇವಾರಿ ಸಮಸ್ಯೆ ನಿವಾರಣೆ ಮಾಡುವಲ್ಲಿ ಅವರ ಜವಬ್ದಾರಿಯೂ ಇದ್ದು, ತಮ್ಮ ಜವಾಬ್ದಾರಿಯನ್ನು ಮರೆತಂತಿದೆ ಎಂದಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಎಂ.ಎಸ್. ವೆಂಕಟೇಶ್ ಅವರು ಅಧ್ಯಕ್ಷರ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಕಾಂಗ್ರೆಸ್‍ನ ಕೆಲ ಸದಸ್ಯರು ಸೇರಿದಂತೆ ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷರ ಹೆಸರನ್ನು ಬಳಸಲಾಗಿದೆ. ಆದರೆ ತಾನು ಯಾವದೇ ಹೇಳಿಕೆಯನ್ನು ನೀಡಿಲ್ಲವೆಂದು ಬಷೀರ್ ಸ್ಪಷ್ಟಪಡಿಸಿದರು.

- ವಾಸು ಆಚಾರ್ಯ