ಆಲೂರು-ಸಿದ್ದಾಪುರ, ಫೆ. 3: ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಸುಳುಗಳಲೆ ಕಾಲೋನಿಯಲ್ಲಿ ಬಹುತೇಕ ಎಲ್ಲಾ ಜಾತಿ-ಧರ್ಮ ಜನಾಂಗದವರು ವಾಸ ಹೊಂದಿದ್ದು, ಈ ಹಿನ್ನೆಲೆ 15 ವರ್ಷಗಳ ಹಿಂದೆ ಇಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ಅದರಂತೆ 1999-2005ರಲ್ಲಿ ಆಗಿನ ಶಾಸಕ ಜೀವಿಜಯ ಹಾಗೂ ಎಂಎಲ್‍ಸಿ ಟಿ. ಜಾನ್ ಅವರುಗಳು ತಲಾ ಒಂದೊಂದು ಲಕ್ಷ ರೂಪಾಯಿಯಂತೆ 2 ಲಕ್ಷ ರೂಪಾಯಿ ಮಂಜೂರಾತಿ ಮಾಡಿದ್ದರು. ಈ ಮೊತ್ತದಲ್ಲಿ ಸಮುದಾಯ ಭವನದ ಕಾಮಗಾರಿಯನ್ನು ಕೈಗೊಂಡು ಹೆಚ್ಚುವರಿ ಹಣದ ಅಭಾವದಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಕಳೆದ 10 ವರ್ಷಗಳಿಂದ ಕಾಮಗಾರಿ ಮುಂದುವರಿಸಲು ಅನುದಾನ ಮಂಜೂರಾಗದೆ ಅನಾಥವಾಗಿದೆ. ಈ ಭಾಗದ ಜನರು ಅರ್ಧಕ್ಕೆ ನಿಂತಿರುವ ಸಮುದಾಯ ಭವನದ ಕಾಮಗಾರಿಯನ್ನು ಮುಂದುವರಿಸಲು ಹೆಚ್ಚುವರಿ ಹಣ ಮಂಜುರಾತಿ ಮಾಡುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂಬದು ಈ ಕಾಲೋನಿ ನಿವಾಸಿಗಳ ಆರೋಪವಾಗಿದೆ. ಆದರೂ ಈ ಹಿಂದೆ ನಡೆದ ತಾಲೂಕು ಪಂಚಾಯ್ತಿತಿ ಚುನಾವಣಾ ಸಂದರ್ಭ ಈ ವ್ಯಾಪ್ತಿಯ ಅಂದಿನ ತಾಲೂಕು ಪಂಚಾಯಿತಿ ಸದಸ್ಯರು ತಾ.ಪಂ. ಅನುದಾನ ಬಂದಿದ್ದು, ಭವನ ಅಭಿವೃದ್ಧಿಪಡಿಸಲಾಗುವದು ಎಂದು ಅಂದಿನ ತಾಪಂ. ಸದಸ್ಯರು ಭೂಮಿಪೂಜೆ ನೆರವೇರಿಸಿದರು. ಆದರೆ ಕಾಮಗಾರಿ ಮಾತ್ರ ಪ್ರಾರಂಭವಗಲಿಲ್ಲ. ಒಟ್ಟಾರೆ ಈ ಸಮುದಾಯ ಭವನ ಪೂರ್ಣಗೊಳ್ಳುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಸುಳುಗಳಲೆ ಕಾಲೋನಿಯ ಹೃದಯ ಭಾಗದಲ್ಲಿ ಪಾಳು ಸಮುದಾಯ ಭವನ ಇದೀಗ ಇಲಿ-ಹೆಗ್ಗಣಗಳ ವಾಸ ಸ್ಥಳವಾಗಿದ್ದು, ಕಟ್ಟಡದ ಅಡಿಪಾಯಗಳನ್ನು ಹೆಗ್ಗಣಗಳು ಕೊರೆಯುತ್ತಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನವಹಿಸಿಸಿರುವದು ವಿಪರ್ಯಾಸ. - ದಿನೇಶ್ ಮಾಲಂಬಿ