ಸುಂಟಿಕೊಪ್ಪ, ಫೆ.3: ‘ದೀಪದಡಿ ಕತ್ತಲೆ’ ಎಂಬ ಮಾತಿಗೆ ಅನ್ವರ್ಥವಾಗುವಂತೆ ಹರದೂರು ಗ್ರಾಮ ಪಂಚಾಯಿತಿ ಕಚೇರಿಯ ಮೇಲ್ಭಾಗದ ಸಭಾಂಗಣದಲ್ಲಿ ನೀರು ಕಟ್ಟಿನಿಂತು ರೋಗ ರುಜಿನಗಳಿಗೆ ಆಹ್ವಾನ ನೀಡುವಂತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಮಹತ್ವ ನೀಡುತ್ತಿದ್ದು ಪ್ರತಿ ಹಳ್ಳಿಯ ಬೀದಿಯು ಶುಚಿತ್ವದಿಂದ ಕೂಡಿದರೆ ಜನರ ಆರೋಗ್ಯ ವೃದ್ಧಿಸಿ ಅಭಿವೃದ್ಧಿಗೆ ಶ್ರೀ ಸಾಮಾನ್ಯರು ಕೈ ಜೋಡಿಸಲು ಸಹಕಾರಿ ಆಗಲಿದೆ ಎಂದು ಹೇಳುತ್ತಾರೆ.

ಆದರೆ ಹರದೂರು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದ 2ನೇ ಮಹಡಿಯಲ್ಲಿ ನೀರು ಸೋರಿ ಕಟ್ಟಿ ನಿಂತಿದ್ದು ಅದರಲ್ಲಿ ಅಶುಚಿತ್ವದಿಂದ ಕೂಡಿರುವದರಿಂದ ಹುಳ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿದೆ. ಈ ಪಂಚಾಯಿತಿ ಒತ್ತಿನಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪುಟಾಣಿ ಮಕ್ಕಳಿಗೆ ಇದರಿಂದಲೇ ಸೊಳ್ಳೆ ಹುಟ್ಟಿ ಅದು ಎಲ್ಲೆಡೆ ಹರಡಿ ಮಕ್ಕಳಿಗೆ ವಿವಿಧ ಖಾಯಿಲೆ ಬರುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿಯವರು ಇತ್ತ ಗಮನಹರಿಸಿ ಶುಚ್ಚಿತ್ವ ಕಾಪಾಡುವಂತಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.