ಮಡಿಕೇರಿ, ಫೆ.3: ಹೇಮಾವತಿ ಜಲಾಶಯದಿಂದ ನಿರಾಶ್ರಿತರಾದ ಕೊಡ್ಲಿಪೇಟೆ ಗ್ರಾಮದ ಮೂರು ಕುಟುಂಬಗಳಿಗೆ ಸರಕಾರ ಮಂಜೂರು ಮಾಡಿರುವ ತಲಾ ಮೂರು ಎಕರೆ ಭೂಮಿಯನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಜೆ.ಆರ್.ಪಾಲಾಕ್ಷ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಜಲಾಶಯದ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ಪರಿಶಿಷ್ಟ ಜಾತಿಯ ಎರಡು ಕುಟುಂಬ ಹಾಗೂ ಹಿಂದುಳಿದ ವರ್ಗದ ಒಂದು ಕುಟುಂಬಕ್ಕೆ ಕೆಳಕೊಡ್ಲಿ ಗ್ರಾಮದಲ್ಲಿ ತಲಾ 3 ಏಕರೆ ಭೂಮಿಯನ್ನು ನೀಡಲಾಗಿತ್ತು. ಮೂರೂ ಕುಟುಂಬಗಳು ಕಳೆÉದ ಮೂವತ್ತು ವರ್ಷಗಳಿಂದ ಸರ್ಕಾರ ಮಂಜೂರು ಮಾಡಿದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿವೆ. ಇದೀಗ ದಿಢೀರ್ ಆಗಿ ವಿವಾದ ಸೃಷ್ಟಿಸಿರುವ ಅರಣ್ಯಾಧಿಕಾರಿಗಳು ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳಿಕೊಳ್ಳುತ್ತ ಮೂರು ಕುಟುಂಬಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಕೃಷಿ ಮಾಡಲು ಕೂಡ ಅವಕಾಶ ನೀಡದ ಅರಣ್ಯ ಅಧಿಕಾರಿಗಳು ಜಾಗ ತೆರವುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ ಮತ್ತು ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಸರ್ಕಾರ ಮಂಜೂರು ಮಾಡಿದ ಜಾಗದ ಬಗ್ಗೆ ಎಲ್ಲಾ ದಾಖಲಾತಿಗಳು ಫಲಾನುಭವಿಗಳ ಬಳಿಯಲ್ಲಿದೆ. ಆದರೂ ಅರಣ್ಯ ಅಧಿಕಾರಿಗಳು ಸರ್ಕಾರದ ಹಾದಿ ತಪ್ಪಿಸಿ ಫಲಾನುಭವಿಗಳಿಗೆ ತೊಂದರೆ ನೀಡಲು ಮುಂದಾಗಿದ್ದಾರೆ. ಸರ್ಕಾರದ 2007ರ ಸುತ್ತೋಲೆ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಕಿರುಕುಳ ನೀಡಿದರೆ, ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇದೀಗ ಕೆಳಕೊಡ್ಲಿ ಗ್ರಾಮದಲ್ಲಿ ಇದೇ ರೀತಿಯ ದೌರ್ಜನ್ಯ ನಡೆಯುತ್ತಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವದಾಗಿ ಪಾಲಾಕ್ಷ ತಿಳಿಸಿದರು.

ಹೇಮಾವತಿ ಹಿನ್ನೀರಿನ ಫಲಾನುಭವಿಗಳಿಗೆ ಪುನರ್ವಸತಿ ಮಂಜೂರಾದ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಅನೆÉೀಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ದಾಖಲಾತಿ ನೀಡುವ ಕಂದಾಯ ಇಲಾಖೆ ನಿಖರವಾದ ಭೂಮಿಯನ್ನು ನೀಡುತ್ತಿಲ್ಲ. ಭೂಮಿಗೆ ಸಂಬಂಧಿಸಿದಂತೆ ಹದ್ದುಬಸ್ತು ದುರಸ್ತಿ ಕಾರ್ಯ ನಡೆದಿಲ್ಲ ಎಂದು ಆರೋಪಿಸಿದ ಪಾಲಾಕ್ಷ ಪುನರ್ವಸತಿ ಜಾಗದ ಹದ್ದುಬಸ್ತನ್ನು ಒಂದು ವಾರದ ಒಳಗೆ ಮಾಡಿಕೊಡದಿದ್ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಅರಣ್ಯಾಧಿಕಾರಿಗಳ ಕಿರುಕುಳದ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿರುವದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಸಂಚಾಲಕ ಎನ್.ಆರ್. ದೇವರಾಜು, ಸದಸ್ಯರುಗಳಾದ ಕೆ.ಬಿ. ಮಹೇಶ್, ಕೆ.ಎ. ಹರೀಶ್, ಕೆ.ಟಿ. ಹನುಮಯ್ಯ ಹಾಗೂ ಡಿ.ಇ. ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.