ಮಡಿಕೇರಿ, ಫೆ. 3: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು-ಸಾಧನೆಗಳನ್ನು ಬಿಂಬಿಸುವ “ಭಾರತ ಭಾಗ್ಯವಿಧಾತ” ಧ್ವನಿ ಬೆಳಕು ಕಾರ್ಯಕ್ರಮ ತಾ. 6 ರಂದು ಸಂಜೆ 6.30 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ವಾರ್ತಾಧಿಕಾರಿ ಚಿನ್ನಸ್ವಾಮಿ ತಿಳಿಸಿದ್ದಾರೆ.

ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು ಕಾರ್ಯಕ್ರಮ ದೃಶ್ಯ ವೈಭವಗಳ ರೂಪಕವಾಗಿದ್ದು, ಕಣ್ತುಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ವೈಚಾರಿಕತೆಯ ಹಿನ್ನೋಟವನ್ನು ಒಳಗೊಂಡಿದ್ದು, ಸುಮಾರು 80 ಮಂದಿ ಕಲಾವಿದರು ಧ್ವನಿ ಬೆಳಕು ನೃತ್ಯ ರೂಪಕ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕವಿಗಳಾದ ಡಾ. ಸಿದ್ದಲಿಂಗಯ್ಯ, ಎಲ್. ಹನುಮಂತಯ್ಯ, ಬಿ.ಟಿ. ಜಾಹ್ನವಿ, ಎಂ. ಚಿನ್ನಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು, ಮೈಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ನರೇಂದ್ರ ಕುಮಾರ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರು ಸಲಹಾ ಮಂಡಳಿಯಲ್ಲಿದ್ದು, ಹಾಗೆಯೇ ಡಾ. ಹಂಸಲೇಖ, ಸಿ. ಬಸವಲಿಂಗಯ್ಯ, ಡಾ. ವೈ.ಕೆ. ನಾರಾಯಣ ಸ್ವಾಮಿ, ಶಶಿಧರ ಅಡಪ ಅವರು ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಲಹೆಯಂತೆ ಭಾರತ ಭಾಗ್ಯವಿಧಾತ ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕ ಮೂಡಿಬರಲಿದೆ ಎಂದು ವಾರ್ತಾಧಿಕಾರಿ ತಿಳಿಸಿದ್ದಾರೆ.

ಭಾರತ ಭಾಗ್ಯ ವಿಧಾತ ಧ್ವನಿ ಬೆಳಕು-ದೃಶ್ಯ ವೈಭವಗಳ ರೂಪಕದ ಪರಿಕಲ್ಪನೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರದ್ದಾಗಿದೆ. ಸಂಗೀತ ಮತ್ತು ಸಾಹಿತ್ಯ ಬಿ.ಎಂ. ಗಿರಿರಾಜ್, ಗೀತೆ ರಚನೆ. ಡಾ. ಕೆ.ವೈ. ನಾರಾಯಣ ಸ್ವಾಮಿ, ಸಂಗೀತ ಪೂರ್ಣಚಂದ್ರ ತೇಜಸ್ವಿ, ರಂಗ ವಿನ್ಯಾಸ ಶಶಿಧರ ಅಡಪ, ನೃತ್ಯ ಸಂಯೋಜನೆ ಪದ್ಮಿನಿ ಅಚ್ಚಿ, ಬೆಳಕು ನಂದ ಕಿಶೋರ್, ವಸ್ತ್ರಾಲಂಕಾರ ಪ್ರಮೋದ್ ಶಿಗ್ಗಾವ್, ಪ್ರಸಾಧನ ರಾಮಕೃಷ್ಣ ಬೆಳ್ತ್ತೂರು, ಸಹ ನಿರ್ದೇಶನ ಎಂ.ಪಿ.ಎಂ. ವೀರೇಶ್, ಸಹಾಯಕರಾಗಿ ಕುಮಾರಿ ಸಾಗರ, ಭರತ್, ಸ್ವರೂಪ, ವಿನೋದ್, ರಾಘವೇಂದ್ರ, ಎಂ. ರಂಗಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ.