ಸೋಮವಾರಪೇಟೆ, ಫೆ. 4: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಕುಶಾಲನಗರಕ್ಕೆ ನೂತನವಾಗಿ ಉಪ ನೋಂದಣಾಧಿಕಾರಿಗಳ ಕಚೇರಿ ಮಂಜೂರಾಗಿದೆ. ಸ್ಥಳೀಯರ ಬಹುದಿನಗಳ ಬೇಡಿಕೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.ಕುಶಾಲನಗರ ಭಾಗದಿಂದ ಆಸ್ತಿ ಸೇರಿದಂತೆ ಇನ್ನಿತರ ನೋಂದಣಿಗಾಗಿ ತಾಲೂಕು ಕೇಂದ್ರದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಆಗಮಿಸಬೇಕಾದ ಬಗ್ಗೆ ಈ ಭಾಗದ ಸಾರ್ವಜನಿಕರು ಸಮಸ್ಯೆ ತೋಡಿಕೊಂಡ ಹಿನ್ನೆಲೆ ತಾನು ವಿಧಾನ ಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಇದಕ್ಕೆ ಸ್ಪಂದಿಸಿರುವ ಸರ್ಕಾರ, ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ ಕುಶಾಲನಗರದಲ್ಲಿ ನೂತನವಾಗಿ ಉಪ ನೋಂದಣಾಧಿಕಾರಿಗಳ ಕಚೇರಿ ತೆರೆಯಲು ಆದೇಶ ಹೊರಡಿಸಿದೆ ಎಂದು ರಂಜನ್ ತಿಳಿಸಿದ್ದಾರೆ.
ನೂತನವಾಗಿ ನೋಂದಣಾಧಿಕಾರಿಗಳ ಕಚೇರಿ ತೆರೆಯಲು ಪಾಲಿಸಬೇಕಾದ ಎಲ್ಲಾ ಮಾನದಂಡಗಳನ್ನೂ ಪಾಲಿಸಲಾಗಿದೆ. ಈ ಭಾಗದಿಂದ ಕಳೆದ 3 ವರ್ಷಗಳಲ್ಲಿ 4 ಕೋಟಿಗೂ ಅಧಿಕ ರಾಜಸ್ವ ಸಂಗ್ರಹವಾಗಿದೆ. ಇದರೊಂದಿಗೆ ಕುಶಾಲನಗರದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿದ್ದು, ಈ ಬಗ್ಗೆ ಇಲಾಖೆಯ ಗಮನ ಸೆಳೆದ ಹಿನ್ನೆಲೆ ನೂತನ ಕಚೇರಿಗೆ ಮಂಜೂರಾತಿ ದೊರೆತಿದೆ ಎಂದು ಶಾಸಕರು ತಿಳಿಸಿದರು.
ನೂತನ ಕಚೇರಿಯಲ್ಲಿ ತಲಾ ಓರ್ವರಂತೆ ಉಪನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಮತ್ತು ‘ಡಿ’ ಗ್ರೂಪ್ ನೌಕರರನ್ನು ಒಳಗೊಂಡಿದ್ದು, ರಾಜ್ಯ ಸರ್ಕಾರದ ಕಂದಾಯ ಇಲಾಖಾ (ನೋಂದಣಿ ಮತ್ತು ಮುದ್ರಾಂಕ) ಅಧೀನ ಕಾರ್ಯದರ್ಶಿ ಟಿ. ನಾರಾಯಣಪ್ಪ ಆದೇಶ ಹೊರಡಿಸಿದ್ದಾರೆ.