ಕುಶಾಲನಗರ, ಫೆ. 4: ಈ ಬಾರಿಯ ಕೇಂದ್ರ ರೈಲ್ವೆ ಬಜೆಟ್ನಲ್ಲಿ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗದ ಬಗ್ಗೆ ಯಾವದೇ ಪ್ರಸ್ತಾವನೆ ಇಲ್ಲದಿದ್ದರೂ ಕೊಡಗು ಮೂಲಕ ರೈಲ್ವೆ ಯೋಜನೆಯೊಂದರ ಸರ್ವೆ ಕಾರ್ಯಕ್ಕೆ ಹಸಿರು ನಿಶಾನೆ ದೊರೆತಿರುವದು ತಿಳಿದುಬಂದಿದೆ. ಈ ಬಾರಿಯ ಹಲವು ಯೋಜನೆಗಳೊಂದಿಗೆ ಜಿಲ್ಲೆಯ ಮೂಲಕ ಹಾದುಹೋಗುವ ಕೇರಳದ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ಪ್ರಸ್ತಾವನೆ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕಂಡುಬಂದಿದ್ದು ಈ ಯೋಜನೆ ಮಾತ್ರ ಜಿಲ್ಲೆಯ ಪರಿಸರವಾದಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು.
ಅಂದಾಜು 300 ಕಿಮೀ ದೂರದ ಈ ನೂತನ ರೈಲ್ವೆ ಯೋಜನೆ ಬಹಳಷ್ಟು ಹಳೆಯ ಯೋಜನೆಯಾಗಿದ್ದರೂ ಇದೀಗ ಮತ್ತೆ ಚಿಗುರೊಡೆದಂತೆ ಕಾಣುತ್ತಿದೆ. ಕರ್ನಾಟಕದ ರೈಲ್ವೆ ರಂಗದಲ್ಲಿ ಈ ಬಾರಿ ಹುಟ್ಟಿಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆಗಳು ಹುಸಿಯಾಗಿದ್ದರೂ ಬೆಟ್ಟ ಅಗೆದು ಇಲಿ ಹಿಡಿದಂತೆ
(ಮೊದಲ ಪುಟದಿಂದ) ಕೊಡಗು ಜಿಲ್ಲೆಯ ಮೂಲಕ ಕೇರಳದ ತಲಚೇರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಕೇರಳ ಸರಕಾರದ ಕನಸು ಮಾತ್ರ ನನಸಾಗುವಂತೆ ಕಾಣುತ್ತಿದೆ.
ಕೊಡಗು ಜಿಲ್ಲೆಯ ವೀರಾಜಪೇಟೆ ಮೂಲಕ ಈ ಯೋಜನೆ ಸಂಪರ್ಕ ಕಲ್ಪಿಸಲಿದ್ದು ಕೆಲವೆಡೆ ಸುರಂಗ ಮಾರ್ಗದ ಯೋಜನೆ ಕೂಡ ಇರುವದಾಗಿ ತಿಳಿದುಬಂದಿದೆ. ತಾ. 8 ರಂದು ಕೇರಳದ ನಿಯೋಗವೊಂದು ಈ ಯೋಜನೆ ಬಗ್ಗೆ ಚರ್ಚಿಸಲು ಕೇಂದ್ರ ರೈಲ್ವೆ ಸಚಿವರ ಬಳಿ ತೆರಳುವ ಕಾರ್ಯಕ್ರಮವೂ ಇರುವದಾಗಿ ಖಚಿತ ಮಾಹಿತಿಗಳು ತಿಳಿಸಿವೆ.
ಈ ಯೋಜನೆಗೆ ಕೊಡಗಿನ ಪರಿಸರವಾದಿಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು ಯೋಜನೆಗೆ ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ಸಿಂಹ ಅವರೂ ಕೂಡ ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಹುಣಸೂರು, ಪಿರಿಯಾಪಟ್ಟಣ ಭಾಗ ಸೇರಿದಂತೆ ಕುಶಾಲನಗರ ಗಡಿಭಾಗದ ಜನರ ಆಶಯದಂತೆ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗ ಕಾಮಗಾರಿ ನಡೆಯಲಿದೆ ಎಂದು ಪ್ರತಾಪ್ಸಿಂಹ ಖಚಿತಪಡಿಸಿದ್ದಾರೆ. ಈ ಹಿಂದೆ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ಅವರೂ ಕೂಡ ಮೈಸೂರು-ಕುಶಾಲನಗರ ಮಾರ್ಗ ಮುಂದಿನ ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಕ್ತಿಯೊಂದಿಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.