ವೀರಾಜಪೇಟೆ, ಫೆ. 4: ಪಟ್ಟಣ ವ್ಯಾಪ್ತಿಯಲ್ಲಿ ಕಸದ ತೊಟ್ಟಿ ಇದ್ದರೂ ಕೂಡ ರಸ್ತೆ ಬದಿಯಲ್ಲಿ ಕಸ ಎಸೆಯುವ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಭೆ ತೀರ್ಮಾನಿಸಿತು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಸಿಕ ಸಭೆಯು ಕೂತಂಡ ಸಚಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣ ಪಂಚಾಯಿತಿ ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ ಪಟ್ಟಣವನ್ನು ಸ್ವಚ್ಚವಾಗಿಡಲು ಪ್ರಯತ್ನಿಸುತ್ತಿದ್ದರೆ ಕೆಲವು ಅಂಗಡಿ ಮಾಲೀಕರು ಸಹಕರಿಸುತ್ತಿಲ್ಲ. ಕಸದ ತೊಟ್ಟಿಗಳನ್ನು ಅಂಗಡಿ ಮುಂದೆ ಇಟ್ಟರೂ ಅದಕ್ಕೆ ಕಸ ಹಾಕದೆ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ. ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಸದಸ್ಯ ಪಾಂಡಂಡ ರಚನ್ ಮೇದಪ್ಪ ಸಭೆಗೆ ತಿಳಿಸಿದಾಗ ಚರ್ಚೆ ನಡೆದು ಕಸ ಹಾಕುವವರ ವಿರುದ್ದ ಕ್ರಮಕ್ಕೆ ಸಭೆ ತಿರ್ಮಾನಿಸಿತು. ಹಿರಿಯ ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ ಎಷ್ಟು ವಸತಿ ಗೃಹ ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ಸರಬರಾಜಿನ ಮೀಟರ್ ಅಳವಡಿಕೆ ಮಾಡಿದ್ದೀರಾ ಎಂದು ವಿವರ ಬಯಸಿದರು. 45 ವಾಣಿಜ್ಯ ಮಳಿಗೆ ಗಳಿಗೆ ಮೀಟರ್ ಅಳವಡಿಸಲಾಗಿದೆ. 90 ಬಾಕಿ ಇದೆ ಎಂದು ಅಧ್ಯಕ್ಷ ಸಚಿನ್ ಕುಟ್ಟಯ್ಯ ಉತ್ತರ ನೀಡಿದರು. ಹೊಸದಾಗಿ ಪಟ್ಟಣದಲ್ಲಿ ನೀರಿನ ಪೂರೈಕೆ ದರ ಹೆಚ್ಚಾದ ಕಾರಣ ವಸತಿ ಗೃಹಗಳಿಗೆ 80ರಿಂದ 100, ವಾಣಿಜ್ಯ ಮಳಿಗೆಗಳಿಗೆ ರೂ 300ರಿಂದ 400 ರೂಗಳಿಗೆ ಪರಿಷ್ಕರಣೆ ಮಾಡಿ ನೂತನ ದರವನ್ನು ವಿದಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇಲ್ಲಿನ ಚಿಕ್ಕಪೇಟೆಯ ಛತ್ರಕೆರೆ ಯನ್ನು ಆಧುನಿಕ ಉದ್ಯಾನವನ್ನಾಗಿ ಮಾರ್ಪಡಿಸಲು ರೂ ಒಂದು ಕೋಟಿ ಹದಿನೈದು ಲಕ್ಷ ವೆಚ್ಚದ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಿ ಮಂಜೂರಾತಿಗಾಗಿ 18ತಿಂಗಳ ಹಿಂದೆಯೇ ಕಳುಹಿಸಲಾಗಿದೆ. ಈಗಿನ ಆಡಳಿತ ಮಂಡಳಿ ಈ ಯೋಜನೆ ಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು ಎಂಬ ಒತ್ತಾಯ ಕೇಳಿ ಬಂತು.
ಪಟ್ಟಣದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆ ಏನಾಯಿತು ಎಂದು ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಕೇಳಿದಾಗ ಪಟ್ಟಣದಲ್ಲಿ ಜಾಗ ಇಲ್ಲದ ಕಾರಣ ಪಟ್ಟಣದ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಪೈಸಾರಿ ಜಾಗ ನೀಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಗದ ವ್ಯವಸ್ಥೆ ಇಲ್ಲ ಎಂಬ ಉತ್ತರ ಬಂದಿದೆ, ನಿರ್ಗತಿಕರಿಗೆ ನಿವೇಶನ ಹಂಚಲು ಸರಕಾರ ಜಾಗ ಖರೀದಿಸಲು ಒಂದು ಎಕರೆ ಜಾಗದ ಮೌಲ್ಯವನ್ನು ಪರಿಷ್ಕರಿಸಿ ಆದೇಶ ಹೊರಡಿಸಿರುವದರಿಂದ ಹಂಚಿಕೆ ಕಾರ್ಯಕ್ರಮ ತ್ವರಿತ ಗತಿಯಲ್ಲಿ ಮುಂದುವರೆಯಲಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಮತೀನ್ ಹಾಗೂ ಮಹಮ್ಮದ್ ರಾಫಿ ಮಾತನಾಡಿ ಪಟ್ಟಣ ಪಂಚಾಯಿತಿ ಮಳಿಗೆಗಳನ್ನು ನಿಯಮದಂತೆ ಏಕೆ ಹರಾಜು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷರು, ಅಂಗಡಿ ಮಳಿಗೆಗಳ ಕಟ್ಟಡಗಳು ಶಿಥಿಲಾವಸ್ಥೆ ಯಲ್ಲಿರುವದನ್ನು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ರಚನ್ ಮೇದಪ್ಪ ಮಾತನಾಡಿ ಪಟ್ಟಣದ ಛತ್ರಕೆರೆ ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿ ಬೃಹತ್ ವಾಹನಗಳನ್ನು ತಿಂಗಳುಗಟ್ಟಲೆ ನಿಲ್ಲಿಸುತ್ತಿದ್ದಾರೆ. ಅವುಗಳ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಪತ್ರ ಬರೆಯುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಉಳಿದಂತೆ ಬರಗಾಲ ಇರುವದರಿಂದ ನೀರಿನ ಶುದ್ಧೀಕರಣ ಕ್ಕಾಗಿ ತೆರೆದ ಬಾವಿಗಳಿಗೆ ಸುಣ್ಣ ಹಾಗೂ ಕ್ಲೋರಿನ್ ನಿರಂತರವಾಗಿ ಸಿಂಪಡಿಸುವಂತೆ ಸಭೆ ತೀರ್ಮಾನಿಸಿತು.
ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೋರ್‍ವೆಲ್ ತೆಗೆಯಲು ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯವಾಗಿದೆ. ಅನುಮತಿಗಾಗಿ ಪಟ್ಟಣ ಪಂಚಾಯಿತಿ ಮೂಲಕ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಹಿಂದಿನ ಪೂರ್ವಭಾವಿ ಬಜೆಟ್ ಸಭೆಯಲ್ಲಿ ಸದಸ್ಯರುಗಳ ನಡುವೆ ವಿಚಾರ ವಿನಿಮಯ ಮಾಡಿ ಬಜೆಟ್ ತಯಾರಿಸಲಾಗಿದೆ. ಇದರಲ್ಲಿ ಕೆಲವು ಲೋಪ ದೋಷಗಳಿರುವದನ್ನು ಸರಿ ಪಡಿಸುವಂತೆ ನಾಮನಿರ್ದೇಶಿತ ಸದಸ್ಯ ಡಿ.ಪಿ.ರಾಜೇಶ್ ಆಗ್ರಹಿಸಿದರು.
ಕುಡಿಯುವ ನೀರು ಪೊರೈಕೆಗೆ ಆದ್ಯತೆ, ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಲು ಕ್ರಮ, ಹಂದಿ ಮಾರುಕಟ್ಟೆ ಸುಂಕ ಎತ್ತಾವಳಿ ಹರಾಜು ಪ್ರಕ್ರಿಯೆಗೆ ದಿನಾಂಕ ಗೊತ್ತು ಪಡಿಸಲು ಸಭೆ ನಿರ್ಧರಿಸಿತು. ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ಅಗಲಿದ ಕಾಂಗ್ರೆಸ್ ಸಮಿತಿಯ ಜಿಲ್ಲಾ ನಾಯಕ ಬಿ,ಟಿ.ಪ್ರದೀಪ್ ಅವರಿಗೆ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ.ಸುನೀತಾ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಕಿರಿಯ ಅಭಿಯಂತರ ಎನ್.ಎಂ.ಹೇಮ್ ಕುಮಾರ್, ಯೋಜನಾಧಿಕಾರಿ ಶೈಲಾ, ರೆವಿನ್ಯೂ ಅಧಿಕಾರಿ ಸೋಮೇಶ್ ಸಿಬ್ಬಂದಿಗಳು ಹಾಜರಿದ್ದರು.