ಮಡಿಕೇರಿ, ಫೆ. 4: ಸ್ತ್ರೀ ಸಂವೇದನಾ ಹಾಗೂ ಸ್ತ್ರೀಪರವಾದ ಕಾಳಜಿಯಿಂದ ಕಥೆ ಬರೆಯುತ್ತಿದ್ದ ಕೊಡಗಿನ ಗೌರಮ್ಮ ವೈಚಾರಿಕ ಪ್ರಜ್ಞೆಯ ಕಥೆಗಾರ್ತಿಯಾಗಿದ್ದರು ಎಂದು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಆಶಾ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ 2016-17ನೇ ಸಾಲಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಅಭಿಮಾನಿ ಯಾಗಿದ್ದ ಕೊಡಗಿನ ಗೌರಮ್ಮ ಅವರಿಗೆ ಹಲವಾರು ಸಾಹಿತಿಗಳ ಒಡನಾಟ ವಿತ್ತು. ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಗೌರಮ್ಮ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಆಧುನಿಕ ಜೀವನ ಶೈಲಿಯನ್ನು ಗೌರಮ್ಮ ಅಳವಡಿಸಿಕೊಂಡಿದ್ದರು. ಪ್ರಸ್ತುತ ಸಮಸ್ಯೆಗಳು, ಸಮಾನತೆಯ ಕಾಳಜಿಯಿಂದ ಕಥೆ ಬರೆಯುತ್ತಿದ್ದ ಗೌರಮ್ಮ ಅವರು ತಮ್ಮ ಜೀವಿತಾವಧಿಯ 27 ವರ್ಷಗಳಲ್ಲಿ ಒಟ್ಟು 21 ಕಥೆಗಳನ್ನು ರಚಿಸಿ ಸ್ತ್ರೀ ಸಂವೇದನೆಯ ಕಾಳಜಿ ಮೆರೆದಿದ್ದರು. ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಕೊಡಗಿನ ಮಹಿಳೆಯರಿಗೇ ಸಿಗುವಂತಹ ಸಾಹಿತ್ಯಗಳು ಮೂಡಿಬರಬೇಕು ಎಂದು ಶುಭ ಹಾರೈಸಿದರು.

ಮನಸ್ಸು ಅಭಿಸಾರಿಕೆ ಕೃತಿ ರಚಿಸಿ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾದ ಚೆನ್ನೈನಲ್ಲಿ ಉದ್ಯೋಗ ದಲ್ಲಿರುವ ಕೊಡಗಿನ ಕವಯಿತ್ರಿ ಕೆ. ಶಾಂತಿ ಅಪ್ಪಣ್ಣ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ಸ್ವೀಕಾರ ಅವಿಸ್ಮರಣೀಯವಾಗಿದೆ. ಹೆಣ್ಣು ಮಕ್ಕಳಲ್ಲಿಯೂ ಸೃಜನಶೀಲತೆ ಯಿರುತ್ತದೆ.

(ಮೊದಲ ಪುಟದಿಂದ) ಮಹಿಳೆಯರೂ ಕಥೆ ಬರೆಯಬಲ್ಲರು. ಒಂದು ಕಥೆ ಕಥೆಗಾರನ ಸಂವೇದನೆಯನ್ನು ಒಳಗೊಂಡಿದ್ದಾಗ ಓದುಗರ ಮನಮುಟ್ಟುತ್ತದೆ. ಟೀಕೆ, ಟಿಪ್ಪಣಿ, ವಿಮರ್ಶೆಗಳು ಕಥೆಗಾರನ ಜವಾಬ್ದಾರಿ ಹೆಚ್ಚಿಸುತ್ತದೆ ಎಂದ ಅವರು ತನ್ನ ಬಾಲ್ಯದ ಸಂದರ್ಭ ಮನೆಯಲ್ಲಿ ನೋವು, ಬಡತನವಿತ್ತು. ಆದರೆ ಮನೆಯಲ್ಲಿ ಪುಸ್ತಕಗಳಿಗೆ ಕೊರತೆಯಿರಲಿಲ್ಲ. ತಂದೆ ಪುಸ್ತಕ ಓದುತ್ತಿದ್ದರು. ಅದು ತನ್ನನ್ನು ಓದುವಂತೆ ಮಾಡಿತು. ಅಮ್ಮನೂ ಪ್ರೋತ್ಸಾಹ ನೀಡುತ್ತಿದ್ದರು. ನಾನು ಹಾಡು ಬರೆಯುತ್ತಿದ್ದೆ. ಅಮ್ಮ ರಾಗ ಹಾಕುತ್ತಿದ್ದರು. ಕೊಡಗಿನ ಗೌರಮ್ಮ ಅವರÀ ಸಾಹಿತ್ಯವನ್ನು ತಾನು ಓದಿದ ಬಳಿಕ ಗೌರಮ್ಮನಂತೆ ಆಗು ಎಂದು ಪ್ರೋತ್ಸಾಹಕ ಮಾತನ್ನಾಡಿದ್ದರು. ಅಂದು ಅಮ್ಮ ಕಂಡ ಕನಸು ಇಂದು ನನಸಾಗಿದೆ ಎಂದು ಹೆಮ್ಮೆಯಿಂದ ನುಡಿದ ಅವರು, ಸಾಹಿತ್ಯ ಸೇವೆಯನ್ನು ಮುಂದುವರೆಸುತ್ತೇನೆ ಎಂದರು.

ಇದೇ ಸಂದರ್ಭ ತನ್ನ ಅಮ್ಮನನ್ನು ವೇದಿಕೆಗೆ ಕರೆದು ತನಗೆ ನೀಡಿ ಗೌರವಿಸಿದ ಪ್ರಶಸ್ತಿಯನ್ನು ಅಮ್ಮನಿಗೆ ನೀಡಿ ಶಾಲು ಹೊದಿಸಿ ಗೌರವಿಸಿದರು.

ಮಹಿಳೆಯರ ಶೋಷಣೆ

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಸಾಹಿತ್ಯದ ಮೂಲಕ ಕ್ರಾಂತಿ ಮಾಡಬಹುದು. ಶಿಕ್ಷಣ ಹಾಗೂ ಸಾಹಿತ್ಯಪರ ಕಾರಣದಿಂದಾಗಿ ಇಂದು ಮಹಿಳಾ ಪರವಾದ ಕಾಳಜಿ, ವಾದ ಹೆಚ್ಚಾಗುತ್ತಿದೆ. ಮಹಿಳೆಯರು ಧೈರ್ಯ ಬೆಳೆಸಿಕೊಂಡಲ್ಲಿ ದಿಟ್ಟತನದಿಂದ ಸಾಹಿತ್ಯ ರಚಿಸಬಹುದು. ಸಾಹಿತಿಗಳಿಗೆ ಅವಕಾಶ ನೀಡದಿದ್ದಲ್ಲಿ ಭಾಷಾ ಪಲ್ಲಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು ಕೊಡಗಿನ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.

ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ, ಮಹಿಳೆಯರು ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರಿಗೆ ಪುರುಷರ ಸಹಕಾರವು ಅಗತ್ಯವಿದೆ. ಹೆಣ್ಣು ಸಂಸಾರದ ಕಣ್ಣು. ಬರಹಗಾರ್ತಿಯರಾಗಿಯೇ ಸಾಹಿತ್ಯ ಕೃಷಿ ಮಾಡುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯ ಕೃಷಿಗೆ ಕರೆ

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಮಹಿಳೆಯರಿಂದ ಕಥೆ, ಕವನ ಕಡಿಮೆಯಿದೆ ಎಂಬ ಜಿಜ್ಞಾಸೆಯಿದೆ. ಮನೆಗೆ ಬಂದ ಸೊಸೆಗೆ ಅತ್ತೆಯ ಉತ್ತೇಜನದ ಅಗತ್ಯವಿದೆ. ಜಿಲ್ಲೆಯ ಕಥೆಗಾರರ ಪುಸ್ತಕಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆಯುವ ಬೇರೆ ಬೇರೆ ಕಾರ್ಯಕ್ರಮಗಳ ಸಂದರ್ಭ ಪುಸ್ತಕಗಳ ಮಾರಾಟದ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದ ಅವರು, ಮಹಿಳೆಯರು ಟಿ.ವಿ. ಮಾಧ್ಯಮ ಮೂಲಕ ಬಿತ್ತರಗೊಳ್ಳುವ ಧಾರಾವಾಹಿಗಳಿಂದ ದೂರವಿದ್ದು, ಉತ್ತಮವಾದ ಸಾಹಿತ್ಯ ರಚನೆಯಲ್ಲಿ ತೊಡಗುವಂತೆ ಕರೆ ನೀಡಿದರು.

ಈ ಸಂದರ್ಭ ತೀರ್ಪುಗಾರರ ಪರವಾಗಿ ಡಾ. ಪ್ರಕಾಶ್ ಕೂಡಿಗೆ ಹಾಗೂ ಕಾಜೂರು ಸತೀಶ್, ಕೆ. ಶಾಂತಿ ಅಪ್ಪಣ್ಣ ಅವರ ‘ಮನಸ್ಸು ಅಭಿಸಾರಿಕೆ' ಕೃತಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿ, ಲೀಲಾ ದಯಾನಂದ್ ಪ್ರಾರ್ಥಿಸಿದರೆ, ಮಡಿಕೇರಿ ತಾಲೂಕು ಕಸಾಪ ನಿರ್ದೇಶಕಿ ಚೋಕಿರ ಅನಿತಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು.