ಸುಂಟಿಕೊಪ್ಪ, ಫೆ. 4: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಗೆ ಸರಕಾರದಿಂದ ಗ್ರಾಮ ವಿಕಾಸ್ ಯೋಜನೆಯಡಿಯಲ್ಲಿ ರೂ. 75 ಲಕ್ಷ ಅನುದಾನ ಲಭ್ಯವಾಗಿದ್ದು, ಶಿರಂಗಾಲ ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಭೂಮಿಪೂಜೆ ನೇರವೇರಿಸಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಗ್ರಾಮ ವಿಕಾಸ್ ಯೋಜನೆಯಡಿ ಬಿಡುಗಡೆಯಾದ ಹಣದಲ್ಲಿ ಶೇ. 50 ರಷ್ಟು ರಸ್ತೆ, ಚರಂಡಿ, ಗ್ರಂಥಾಲಯಕ್ಕೆ ಶೇ. 12 ಕ್ರೀಡಾ ಚಟುವಟಿಕೆಗೆ, ಶೇ. 12 ಸೋಲಾರ್ ದೀಪಕ್ಕೆ, ಶೇ. 3 ಗುಂಡಿಗೆ, ಶೇ. 2 ಹಾಗೂ ಮಸೀದಿ-ಚರ್ಚ್‍ಗೆ ಆದ್ಯತೆ ಅನುಸಾರ ಅನುದಾನ ಬಳಸಬಹುದು ಎಂದು ಹೇಳಿದರು. ಈ ವಿಭಾಗದಲ್ಲಿ ಬಹಳಷ್ಟು ರಸ್ತೆ ಹಾಳಾಗಿದ್ದು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯಡಿ 7 ಕಿ.ಮೀ. ರಸ್ತೆ ಕಾಮಗಾರಿಗೆ ಅನುಮೋದನೆಗಾಗಿ ಕೋರಿದ್ದು, ಆ ಹಣ ಬಿಡುಗಡೆಯಾಗಲಿದೆ ಎಂದು ಶಾಸಕರು ಗ್ರಾಮಸ್ಥರ ಮನವಿಗೆ ಪೂರಕವಾಗಿ ಹೇಳಿದರು. ನಾಕೂರು-ಶಿರಂಗಾಲದಲ್ಲಿರುವ ಪೈಸಾರಿ ಜಾಗವನ್ನು ವಸತಿ ರಹಿತರಿಗೆ ನೀಡಬೇಕು. ಅಕ್ರಮ-ಸಕ್ರಮ ಸಮಿತಿಯಡಿ 94 ಸಿ ಅಡಿ ಅರ್ಜಿ ಸಲ್ಲಿಸಿದ 56 ಮಂದಿಯ ಕಡತ ಕಂದಾಯ ಇಲಾಖೆಗೆ ತಲಪಿದೆ. ಶಾಸಕರು ಅವರಿಗೆ ಹಕ್ಕುಪತ್ರ ವಿತರಿಸಬೇಕೆಂದು ಸಮಾಜ ಸೇವಕ ಪೊನ್ನ ಹೇಳಿದರು. ಈ ಮಧ್ಯೆ ಗ್ರಾ.ಪಂ. ಸದಸ್ಯ ವಸಂತ ಗ್ರಾಮಸ್ಥರಾದ ಸುರೇಶ್ ಒತ್ತುವರಿ ಜಾಗದ ಹೆಸರಿನಲ್ಲಿ ಈ ಊರಿನಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾ ರೆಂದು ಹೇಳಿದಾಗ 2 ಗುಂಪಿನ ಮಧ್ಯ ಮಾತಿನ ಚಕಮಕಿ ನಡೆಯಿತು. ಶಾಸಕ ರಂಜನ್ ಈ ಬಗ್ಗೆ ಸಭೆ ನಡೆಸಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಮಣಿ, ನಾಕೂರು-ಶಿರಂಗಾಲ ಗ್ರಾ.ಪಂ. ಅಧ್ಯಕ್ಷೆ ರಂಜನಿ, ಉಪಾಧ್ಯಕ್ಷೆ ಯಶೋದ, ಸದಸ್ಯರಾದ ಬಿಜು, ವಸಂತ, ಮಾಜಿ ಸದಸ್ಯ ಚೋಮಣಿ, ಪಿಡಿಓ, ಕಾರ್ಯದರ್ಶಿ ಸಿಬ್ಬಂದಿಗಳು ಉಪಸ್ಥಿತರಿದ್ದರು.