ಸಿದ್ದಾಪುರ, ಫೆ. 4: ಸದಾ ಸುದ್ಧಿಯಲ್ಲಿರುವ ಸಿದ್ದಾಪುರ ಗ್ರಾ.ಪಂ. ಮಾರುಕಟ್ಟೆಯಲ್ಲಿ ಮಾಂಸದ ಮಾರಾಟ ಮಳಿಗೆ ಹಾಗೂ ದೊಡ್ಡಿಯ ನಿರ್ಮಾಣಕ್ಕೆ ಮುಂದಾಗಿದ್ದು, ಮಾರುಕಟ್ಟೆಗೆ ಭೇಟಿ ನೀಡಿದ ಅಧ್ಯಕ್ಷರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಮಾಂಸ ಹಾಗೂ ಮೀನು ಮಾರಾಟವನ್ನು ಮಾರುಕಟ್ಟೆಗೆ ಸ್ಥಳಾಂತರಿಸಲು ಗ್ರಾ.ಪಂ. ನಿರ್ಧರಿಸಿದ್ದು, ಇದಕ್ಕಾಗಿ ಮಾರುಕಟ್ಟೆಯ ಬದಿಯಲ್ಲಿ ದೊಡ್ಡಿ ಹಾಗೂ ಮಾರಾಟ ಮಳಿಗೆಗಳ ಕಾಮಗಾರಿ ಆರಂಭಿಸಿದ್ದು, ಆರಂಭದಿಂದಲೂ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದರು. ಗ್ರಾ.ಪಂ. ಅಧ್ಯಕ್ಷರು, ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಹಾಗೂ ಗ್ರಾ.ಪಂ. ಸದಸ್ಯರುಗಳು ಮಾರುಕಟ್ಟೆ ಭೇಟಿ ನೀಡಿದ ಸಂದರ್ಭ ಸ್ಥಳೀಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭ ಅಧ್ಯಕ್ಷರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಸರಿತಾ ಪೂಣಚ್ಚ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರು. ಈ ಸಂದರ್ಭ ಸ್ಥಳೀಯ ನಿವಾಸಿ ನಾರಾಯಣ ಮಾರುಕಟ್ಟೆಯಲ್ಲಿ ಕೊಳೆತು ನಾರುತ್ತಿರುವ ಮಾಂಸದ ತ್ಯಾಜ್ಯಗಳನ್ನು ಮಾರುಕಟ್ಟೆಗೆ ಭೇಟಿ ನೀಡಿದ ಅಧ್ಯಕ್ಷರು ಹಾಗೂ ಸದಸ್ಯರ ಎದುರು ಪ್ರದರ್ಶಿಸಿದ್ದಲ್ಲದೇ, ತಾವು ಮನುಷ್ಯರಲ್ಲವೇ ಎಂದು ಪ್ರಶ್ನಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.

ಸ್ಥಳೀಯ ನಿವಾಸಿ ಆಬಿದ್ ಮಾತನಾಡಿ, ಮಾಂಸದ ದೊಡ್ಡಿ ಹಾಗೂ ಮಳಿಗೆ ಆರಂಭಿಸುವದರಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಈಗಾಗಲೇ ಮಾರುಕಟ್ಟೆಯ ಆವರಣದಲ್ಲಿರುವ ಆಡು ದೊಡ್ಡಿಯಲ್ಲಿ ಮಾಂಸದ ತ್ಯಾಜ್ಯಗಳು ಎಲ್ಲೆಡೆ ಸುರಿಯುತ್ತಿದ್ದು, ಕೊಳೆತು ದುರ್ನಾತ ಬೀರುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮುಂದಿನ ಒಂದು ವಾರಗಳಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದಲ್ಲಿ ಗ್ರಾ.ಪಂ. ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ದೇವಜಾನು, ಕರ್ಪಯ್ಯ, ರೆಜಿತ್ ಕುಮಾರ್, ಪೂವಮ್ಮ, ಪ್ರತಿಮಾ ಚಂದ್ರಶೇಖರ್, ಜಾಫರ್ ಆಲಿ, ಪ್ರೇಮ, ಸುಶೀಲ ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.

- ವಾಸು