ಮಡಿಕೇರಿ, ಫೆ. 4: ನೀರಿನಿಂದ ಹರಡುವ ರೋಗಗಳ ನಿಯಂತ್ರಣ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ. ಶಿವಕುಮಾರ್ ಕೋರಿದ್ದಾರೆ. ಶುದ್ಧ ಕುಡಿಯುವ ನೀರಿಗೆ ಬಣ್ಣ ಮತ್ತು ವಾಸನೆ ಇರುವದಿಲ್ಲ. ಕಲುಷಿತ ನೀರು ಕುಡಿಯುವದರಿಂದ ಸಾರ್ವಜನಿಕರಿಗೆ ಅನೇಕ ರೋಗರುಜಿನಗಳು ಬರುತ್ತವೆ. ಮುಖ್ಯವಾಗಿ ರೋಗಗಳಾದ ಕಾಲರಾ, ಕರಳುಬೇನೆ (ವಾಂತಿ ಬೇಧಿ), ಟೈಫಾಯ್ಡ್ (ವಿಷಮಶೀತಜ್ವರ), ಹೆಪಟೈಟಿಸ್, ಪೋಲಿಯೋ, ಆಮಶಂಕೆ, ಇಲಿಜ್ವರ, ಜಂತುಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮತ್ತಿತರ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಕಾರಣಗಳು: ನೀರಿನ ಮೂಲ ಬಾವಿ, ಕೊಳವೆಬಾವಿ ಮತ್ತು ಟ್ಯಾಂಕರ್ ಸುತ್ತಮುತ್ತ ಬಳಸಿದ ನೀರು ನಿಲ್ಲುವದರಿಂದ, ಮಲ ವಿಸರ್ಜನೆ, ದನ ಕರುಗಳನ್ನು ಸ್ವಚ್ಛಗೊಳಿಸುವದು ಹಾಗೂ ಬಟ್ಟೆ ಪಾತ್ರೆ ತೊಳೆದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರ್ಪಡೆಯಾಗುವದು. ನೀರಿನ ಸಂಗ್ರಹಣೆ, ನೀರಿನ ಟ್ಯಾಂಕ್‍ನಿಂದ ಸರಬರಾಜಾಗುವ ಪೈಪುಗಳಲ್ಲಿ ಸೋರಿಕೆ ಮತ್ತು ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸದಿರುವದರಿಂದ, ನೀರು ಪೂರೈಕೆ ನಲ್ಲಿಗಳು ತಗ್ಗಿನಲ್ಲಿದ್ದಾಗ ಅದರಲ್ಲಿ ನೀರು ನಿಂತು ಕಲುಷಿತಗೊಂಡು ನೀರು ಪೂರೈಕೆ ಪೈಪುಗಳಲ್ಲಿ ಪುನಃ ಸೇರುವದು. ಮನೆಯಲ್ಲಿ ಸಂಗ್ರಹಿಸಿದ ನೀರು ಕಲುಷಿತಗೊಳ್ಳುವದು.

ಮುಂಜಾಗ್ರತಾ ಕ್ರಮಗಳು: ಕುಡಿಯುವ ನೀರಿನ ಮೂಲಗಳ ಹತ್ತಿರ ಬಳಸಿದ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವದು. ಮಲ ವಿಸರ್ಜನೆ, ದನ ಕರುಗಳನ್ನು ಸ್ವಚ್ಛಗೊಳಿಸುವದು ಹಾಗೂ ಬಟ್ಟೆ ಪಾತ್ರೆ ತೊಳೆದ ನೀರು, ಕುಡಿಯುವ ನೀರಿನ ಮೂಲಗಳಿಂದ ದೂರ ಇರುವ ಹಾಗೆ ವ್ಯವಸ್ಥೆಗೊಳಿಸುವದು. ನೀರಿನ ಪೈಪುಗಳು ಸೋರಿಕೆಯಿದ್ದಲ್ಲಿ ತ್ವರಿತವಾಗಿ ದುರಸ್ತಿಗೊಳಿಸುವದು, ನಿಯಮಿತವಾಗಿ ಪ್ರತೀ ಹತ್ತು ದಿನಗಳಿಗೊಮ್ಮೆ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸುವದು ಹಾಗೂ ನೀರು ತುಂಬಿದ ಮೇಲೆ ಕ್ಲೋರಿನೇಷನ್ ಮಾಡುವದು. ನೀರು ಪೂರೈಕೆ ನಲ್ಲಿಗಳು ಎತ್ತರದ ಸ್ಥಳದಲ್ಲಿ ಇರುವಂತೆ ಹಾಗೂ ಮುಚ್ಚಳವಿರುವ ನಲ್ಲಿಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳುವದು. ಮನೆಯಲ್ಲಿ ಸಂಗ್ರಹಿಸಿದ ನೀರು ಮಕ್ಕಳ ಕೈಗೆ ಮತ್ತು ಸಾಕು ಪ್ರಾಣಿಗಳಿಗೆ ಎಟುಕದಂತೆ ಎತ್ತರದಲ್ಲಿರಿಸಿ, ನೀರು ತೆಗೆದುಕೊಳ್ಳಲು ಹಿಡಿಕೆ ಇರುವ ಬಟ್ಟಲನ್ನು ಉಪಯೋಗಿಸುವದು.

ಕುಡಿಯುವ ನೀರಿನ ಮೂಲಗಳನ್ನು ನಿಯಮಿತವಾಗಿ ಕ್ಲೋರಿನೇಷನ್ ಮಾಡಿಸಿ, ಶುದ್ಧವಾದ ನೀರನ್ನು ಪೂರೈಸುವದು. ಕಾಲಕಾಲಕ್ಕೆ (ಹತ್ತು ದಿನಗಳಿಗೊಮ್ಮೆ) ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸುವದು. ಪಂಚಾಯಿತಿ ಅನುದಾನದಲ್ಲಿ ಕನಿಷ್ಟ 25 ಕೆ.ಜಿ. ಬ್ಲೀಚಿಂಗ್ ಪುಡಿ ದಾಸ್ತಾನು ಯಾವಾಗಲೂ ಇಟ್ಟುಕೊಳ್ಳುವದು. ನೀರಿನ ಪೂರೈಕೆ ಪೈಪು ಸೋರಿಕೆಯಿದ್ದಲ್ಲಿ ಪಂಚಾಯಿತಿ ವತಿಯಿಂದ ದುರಸ್ತಿಗೊಳಿಸುವದು. ಬೋರ್‍ವೆಲ್ ಸುತ್ತಮುತ್ತಲಿನ 100 ಮೀಟರ್ ಆಸುಪಾಸಿನಲ್ಲಿ ತಿಪ್ಪೆಗುಂಡಿ, ಗೊಬ್ಬರದ ಗುಂಡಿ ಇದ್ದಲ್ಲಿ ಸ್ಥಳಾಂತರಿಸುವದು ಹಾಗೂ ಚರಂಡಿಯ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವದು. ಕುಡಿಯುವ ನೀರಿನ ಮಾದರಿಗಳನ್ನು ಶುದ್ಧೀಕರಿಸಿದ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುವದು. ಅಶುದ್ಧ ಎಂದು ಕಂಡುಬಂದ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸಿ 15 ದಿನಗಳ ನಂತರ ಪುನಃ ಪರೀಕ್ಷೆಗೆ ಒಳಪಡಿಸುವದು.

ರೋಗ ಹರಡಲು ಕಾರಣವಾದ ನೀರಿನ ಮೂಲವನ್ನು ಮೊದಲ ಪ್ರಕರಣದ ಆಧಾರದ ಮೇಲೆ ಪತ್ತೆಹಚ್ಚುವದು. ಪಂಚಾಯಿತಿ ವತಿಯಿಂದ ಸುರಕ್ಷಿತ ಕುಡಿಯುವ ನೀರನ್ನು ತಕ್ಷಣ ಒದಗಿಸುವ ಕ್ರಮ ಕೈಗೊಳ್ಳುವದು. ಕುದಿಸಿ ಆರಿಸಿದ ನೀರನ್ನು ಮತ್ತು ಬಿಸಿಯಾದ ಆಹಾರ ಸೇವಿಸಲು ಸಾರ್ವಜನಿಕರಿಗೆ ಮಾಹಿತಿ ನೀಡುವದು. ಗ್ರಾಮದಲ್ಲಿನ ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಕ್ಲೋರಿನೇಷನ್ ಮಾಡುವುದು (ರೆಸಿಡ್ಯುಯಲ್ ಕ್ಲೋರಿನೇಷನ್). ಶುದ್ಧ ಆಹಾರ ತಯಾರಿಕೆ ಮತ್ತು ವೈಯಕ್ತಿಕ ಸ್ವಚ್ಛತಾ ಕ್ರಮಗಳನ್ನು ಪ್ರೋತ್ಸಾಹಿಸಲು ಮಾಹಿತಿ ಶಿಕ್ಷಣ ಚಟುವಟಿಕೆಗಳನ್ನು ಕೈಗೊಳ್ಳುವದು.

ಕಾಮಾಲೆ ರೋಗ: ಕಾಮಾಲೆ ರೋಗ ಯಕೃತಿನ (ಲಿವರ್) ಸೋಂಕಿನಿಂದ ಉಂಟಾಗುತ್ತದೆ. ರೋಗದ ಸೋಂಕಿಗೆ ಹಲವಾರು ವೈರಾಣುಗಳು ಕಾರಣವಾಗಿವೆ. ಅವುಗಳಲ್ಲಿ ಸೌಮ್ಯ ಸ್ವರೂಪದ ‘ಎ’ ವೈರಾಣುವಿನಿಂದ ಹಿಡಿದು ತೀವ್ರ ಸ್ವರೂಪದ ‘ಬಿ’ ವೈರಾಣು ಹಾಗೂ ‘ಸಿ’, ‘ಡಿ’, ‘ಇ’ ಮತ್ತು ‘ಜಿ’ ವೈರಾಣುವಿನಿಂದ ರೋಗಕ್ಕೆ ತುತ್ತಾಗಬಹುದು. ಕಾಮಾಲೆ ರೋಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ, ಜನಸಾಂದ್ರತೆ ಜಾಸ್ತಿ ಇರುವಲ್ಲಿ ಮತ್ತು ವೈಯಕ್ತಿಕ ಹಾಗೂ ಪರಿಸರ ನೈರ್ಮಲ್ಯ ಕೊರತೆ ಇರುವ ಕಡೆ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತದೆ.

ಈ ರೋಗದ ಚಿಹ್ನೆಗಳು ಜ್ವರ, ಚಳಿ, ತಲೆನೋವು, ಆಯಾಸ, ದೇಹ ಪೂರ್ಣ ನಿಶ್ಯಕ್ತಿ, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಹಸಿವು ಇಲ್ಲದಿರುವದು, ಹಳದಿ ಬಣ್ಣದ ಮೂತ್ರ ಹೋಗುವದು. ಇಂತಹ ರೋಗಿಗಳನ್ನು ಪರೀಕ್ಷಿಸಿದಾಗ ಕಣ್ಣು, ಚರ್ಮ, ಉಗುರುಗಳು ಹಳದಿಯಾಗಿರುವದು ಕಂಡು ಬರುತ್ತದೆ. ಇದನ್ನು ಕಾಮಾಲೆ ರೋಗವೆಂದು ಕರೆಯುತ್ತಾರೆ. ಕಾಮಾಲೆ ರೋಗ ಎಲ್ಲಾ ವಯಸ್ಸಿನವರಲ್ಲೂ ಲಿಂಗ ತಾರತಮ್ಯವಿಲ್ಲದೆ ಕಂಡು ಬರಬಹುದು. ಆದರೆ ಹೆಚ್ಚಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ.

ಈ ರೋಗದಿಂದ ನರಳುತ್ತಿರುವ ರೋಗಿಗಳು ಕಾಮಾಲೆ ರೋಗ ಲಕ್ಷಣಗಳು ಕಂಡುಬರುವ ಎರಡು ವಾರ ಮೊದಲು, ಕಂಡು ಬಂದ ಒಂದು ವಾರದವರೆಗೂ ರೋಗಾಣುವನ್ನು ಮಲದ ಮೂಲಕ ಹೊರಹಾಕುತ್ತಾರೆ. ಇಂತಹ ರೋಗಿಗಳ ಮಲವು ಕುಡಿಯುವ ನೀರು, ತಿನ್ನುವ ಆಹಾರವನ್ನು ಕಲುಷಿತಗೊಳಿಸಿದರೆ ಇಂತಹ ಆಹಾರವನ್ನು ಸೇವಿಸಿದ ಈ ರೋಗದ ವಿರುದ್ಧ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸಾಮಾನ್ಯವಾಗಿ 25 ರಿಂದ 35 ದಿನಗಳ ನಂತರ ರೋಗ ಲಕ್ಷಣಗಳು ಕಂಡು ಬರಬಹುದು. ಅಪರೂಪದಲ್ಲಿ ಕೆಲವೊಮ್ಮೆ ರಕ್ತದ ಮೂಲಕವೂ ಈ ಕಾಮಾಲೆ ರೋಗ ಹರಡಬಲ್ಲದು. ಒಮ್ಮೆ ಈ ರೋಗದಿಂದ ನರಳಿದವರೂ ಶೇ. 95 ರಷ್ಟು ನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಶೇ. 5 ರಷ್ಟು ಜನರು ಪುನಃ ಈ ರೋಗಕ್ಕೆ ತುತ್ತಾಗಬಹುದು.

ನಿಯಂತ್ರಣ ಕ್ರಮಗಳು: ರೋಗಿಗಳು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದು ವೈದ್ಯರ ಸಲಹೆ ಸೂಚನೆಯನ್ನು ಪಾಲಿಸುವದು. ರೋಗಿಗಳನ್ನು ಪ್ರತ್ಯೇಕವಾಗಿಸುವದು ಹಾಗೂ ಉಪಯೋಗಿಸುವ ಪಾತ್ರೆ ಬಟ್ಟೆ ಬರೆಗಳನ್ನು ಕ್ರಿಮಿ ನಾಶಕದಿಂದ ಶುದ್ದೀಕರಿಸುವದು, ಮಲ ಮೂತ್ರವನ್ನು ಕ್ರಿಮಿನಾಶಕ ಹಾಕಿ ವಿಲೇವಾರಿ ಮಾಡುವದು. ಸುರಕ್ಷಿತ ನೀರಿನ ಸರಬರಾಜು, ಆಹಾರ ಮತ್ತು ಪ್ರತಿಯೊಬ್ಬರೂ ಶೌಚಾಲಯ ವ್ಯವಸ್ಥೆ ಬಳಸುವದು.

ವೈಯಕ್ತಿಕ ನೈರ್ಮಲ್ಯ ಪಾಲನೆ, ಮಲ ಮೂತ್ರ ವಿಸರ್ಜನೆಗೆ ಹೋಗಿ ಬಂದಾಗ ಸಾಬೂನಿನಿಂದ ಕೈಕಾಲು ತೊಳೆಯುವದು, ಆಹಾರ ಪಾನೀಯ ಸ್ವೀಕರಿಸುವ ಮೊದಲು ಕೈಕಾಲು ಮುಖ ತೊಳೆಯುವದು ಇತ್ಯಾದಿ. ಶುದ್ದೀಕರಿಸಿದ ಸಿರೆಂಜ್ ಸೂಜಿ ಬಳಸುವದು. ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ಪಾಲನೆ. ಮನೆಗಳಲ್ಲಿ, ಊಟ ಉಪಹಾರ ಮಂದಿರಗಳಲ್ಲಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸುವದು.

ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ಪಾನೀಯ ಹಾಗೂ ಹಣ್ಣು-ಹಂಪಲು, ತರಕಾರಿಗಳನ್ನು ಉಪಯೋಗಿಸಬಾರದು. ಕೊಳೆತ ಆಹಾರ, ಮೀನು, ಮಾಂಸ, ಐಸ್‍ಕ್ರೀಂ, ಶೀತಲೀಕರಿಸಿದ ಆಹಾರ ಇತ್ಯಾದಿಗಳನ್ನು ಉಪಯೋಗಿಸಬಾರದು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಸೂಪರ್ ಕ್ಲೋರಿನೇಶನ್ ಮಾಡುವದು.