*ಗೋಣಿಕೊಪ್ಪಲು, ಫೆ. 5: ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ವತಿಯಿಂದ ರೈತರಿಗೆ ಎಲೋಪಿನ ಮೆಣಸು ಸಸಿಗಳನ್ನು ಮಾಜಿ ಎಂ.ಎಲ್.ಸಿ. ಸಂಘದ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ವಿತರಿಸಿದರು.

ಹಾಸನ ಜಿಲ್ಲೆ ಅರಕಲಗೋಡು ತಾಲೂಕಿನ ದೊಡ್ಡಮಾಗ್ಗೆ ಫಾರ್ಮ್ ಹೌಸಿನಲ್ಲಿ 10 ಲಕ್ಷ ಸಸಿ ಮಡಿಗಳನ್ನು ಸಂಘದ ವತಿಯಿಂದ ರೈತ ವಸಂತ್ ಬೆಳೆದ ಸಸಿಗಳನ್ನು ರೈತರಿಗೆ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ವತಿಯಿಂದ ವಿತರಿಸಲಾಯಿತು.ವಿದೇಶಿ ತಳಿಯ ಎಲೋಪಿನ ಮೆಣಸಿಗೆ ಬಹುಬೇಡಿಕೆ ಇದೆ. ಉಪ್ಪಿನಕಾಯಿ ತಯಾರಿಕೆಗೆ ಶ್ರೇಷ್ಠವಾದ ಮೆಣಸು ಇದಾಗಿದೆ. ವಿದೇಶದಲ್ಲಿ ಇದರ ಬೇಡಿಕೆ ಹೆಚ್ಚಿರುವದರಿಂದ ಕಿತ್ತಳೆ ಬೆಳೆಗಾರರ ಸಂಘದ ವತಿಯಿಂದ ಮೆಣಸು ಸಸಿಗಳನ್ನು ನೆಟ್ಟು ರೈತರಿಗೆ ವಿತರಿಸುವ ಮೂಲಕ ಸುಮಾರು 500 ಟನ್ ಮೆಣಸು ಪೂರೈಸುವ ಗುರಿ ಹೊಂದಿದೆ ಎಂದು ಅರುಣ್ ಮಾಚಯ್ಯ ಮಾಹಿತಿ ನೀಡಿದರು.

20 ಲಕ್ಷ ವೆಚ್ಚದಲ್ಲಿ ಎಲೋಪಿನ ಮೆಣಸಿನ ಬೀಜಗಳನ್ನು ಬಿತ್ತಲಾಗಿದೆ. ತಾಲೂಕಿನ ರೈತರಿಗೆ ಸಸಿಗಳನ್ನು ನೀಡಿ ಉತ್ತಮ ಮೆಣಸುಗಳನ್ನು ಪಡೆಯುವ ಉದ್ದೇಶ ಹೊಂದಲಾಗಿದ್ದು, ರೈತರಿಂದ ನೇರ ಖರೀದಿ ಮಾರುಕಟ್ಟೆ ಸೌಲಭ್ಯವನ್ನು ಸಂಘದ ವತಿಯಿಂದ ನೀಡಲಾಗಿದೆ ಎಂದರು. ಕಳೆದ ವರ್ಷ 252 ಟನ್ ಮೆಣಸುಗಳನ್ನು ಖರೀದಿಸಲಾಗಿತ್ತು. ಈ ಬಾರಿ 2 ಪಟ್ಟು ಹೆಚ್ಚು ಖರೀದಿಸುವ ಆಕಾಂಕ್ಷೆ ಹೊಂದಿದ್ದು, ರೈತರಿಂದ ಉತ್ತಮ ಮೆಣಸುಗಳು ದೊರಕಬಹುದೆಂಬ ನಿರೀಕ್ಷೆ ಹೊಂದಿದ್ದೇವೆ. ಇದರೊಂದಿಗೆ ಸಿಹಿ ಗೆಣಸು, ಬೇಬಿ ಕಾರ್ನ್‍ಗಳನ್ನು ಸಹ ಖರೀದಿಸುವ ನಿರೀಕ್ಷೆ ಹೊಂದಿದ್ದೇವೆ ಎಂದರು.

ರೈತರು ಬೆಳೆದ ಮೆಣಸು ಹಾಗೂ ಬೇಬಿ ಕಾರ್ನ್, ಸಿಹಿ ಗೆಣಸು ಬೆಳೆಗಳಿಗೆ ಮುಕ್ತ ಮಾರುಕಟ್ಟೆ ಒದಗಿಸಲು ಸಂಘ ಮುಂದಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ 50 ರಿಂದ 100 ರೈತರನ್ನು ಸಂಘದ ಸದಸ್ಯರಾಗಿ ಸೇರಿಸಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎಲೋಪಿನ ಮೆಣಸು ವಿದೇಶಿ ತಳಿಯಾಗಿದೆ. ಇದು ಸ್ಥಳೀಯ ತಳಿಗಳಿಗಿಂತ ವಿಭಿನ್ನವಾಗಿದ್ದು, ಗಾತ್ರ ಹಾಗೂ ತೂಕದಲ್ಲಿ ಹೆಚ್ಚಳತೆಯನ್ನು ಕಾಣಬಹುದಾಗಿದೆ. 1 ಕೆ.ಜಿ. ಮೆಣಸಿನ ಬೀಜಕ್ಕೆ ಸುಮಾರು 1 ಲಕ್ಷದಷ್ಟು ಹಣ ಇದ್ದು, 90 ದಿನಗಳಲ್ಲಿ ಫಸಲನ್ನು ಕಾಣಬಹುದಾಗಿದೆ. ರೈತರು ಎಲೋಪಿನ ಬೆಳೆ ಬೆಳೆಯುವದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು ತಿಳಿಸಿದರು.

ಈ ಸಂದರ್ಭ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರು ಗಳಾದ ಕಡೇಮಾಡ ಸುನಿಲ್ ಮಾದಪ್ಪ, ಕಿರಿಯಮಾಡ ಅರುಣ್ ಪೂಣಚ್ಚ, ಎ.ಆರ್. ಕೃಷ್ಣ ಕುಮಾರ್, ಸಣ್ಣುವಂಡ ವಿಶ್ವನಾಥ್, ಸುರೇಶ್, ಪುಲಿಯಂಡ ಶೋಭಾ, ಮಳವಂಡ ಅರವಿಂದ್ ಕುಟ್ಟಪ್ಪ, ವ್ಯವಸ್ಥಾಪಕ ಮಧು, ಸಿಬ್ಬಂದಿಗಳಾದ ಕಾವೇರಮ್ಮ, ಇಂದಿರಾ, ಚೋಂದಮ್ಮ, ರಾಜು ಹಾಜರಿದ್ದರು.