ಮಡಿಕೇರಿ, ಫೆ. 5: ಕೊಡಗು ಜಿಲ್ಲೆ ಕರ್ನಾಟಕದ ಪುಟ್ಟ ಜಿಲ್ಲೆ... ಆದರೂ ಈ ಪುಟ್ಟ ಜಿಲ್ಲೆ ಭಾರತ ದೇಶ ಮಾತ್ರವಲ್ಲ ವಿಶ್ವವ್ಯಾಪಿಯಾಗಿ ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆದಿರುವದು... ಸೆಳೆಯುತ್ತಿರುವದು ವಿಶೇಷ ಎಂಬದು ಎಲ್ಲರಿಗೂ ಗೊತ್ತಿರುವ ವಿಚಾರ.ಭೌಗೋಳಿಕವಾದ ಹಿನ್ನೆಲೆ ಪರಿಸರ, ಆಚಾರ-ವಿಚಾರ, ಸಂಸ್ಕøತಿ, ಆಹಾರ ಪದ್ಧತಿ, ಉಡುಗೆ-ತೊಡುಗೆ ಎಲ್ಲವೂ ವಿಭಿನ್ನ. ಇದೆಲ್ಲದರ ನಡುವೆ ಕೊಡಗಿನ ಕಿತ್ತಳೆ, ಏಲಕ್ಕಿ, ಕಾಫಿ, ಕರಿಮೆಣಸು ಇತ್ಯಾದಿ ಬೆಳೆಗಳೂ ಪ್ರಾಮುಖ್ಯತೆ ಹೊಂದಿದೆ.2017ರ ವರ್ಷಾರಂಭ ಕೊಡಗಿನ ಪಾಲಿಗೆ ಮತ್ತೊಂದು ವಿಶೇಷತೆಯನ್ನು ತಂದುಕೊಟ್ಟಿದೆ. ಬಹುಶಃ ಹತ್ತು... ಹಲವಾರು ವರ್ಷಗಳಿಂದ ಯಾರೂ ಕಂಡು ಕೇಳರಿಯದ ಮಾದರಿಯಲ್ಲಿ ಕೊಡಗು ಘಮಘಮಿಸುತ್ತಿದೆ.
ಹೌದು... ಕೊಡಗು ಜಿಲ್ಲೆಯ ಆರ್ಥಿಕ ಬೆನ್ನೆಲುಬು ಕಾಫಿ ಫಸಲು... ಕಾಫಿ ಉತ್ಪಾದನೆಯಿಂದಲೇ ಕೊಡಗಿನ ಮಂದಿ, ಬೆಳೆಗಾರರು ಮಾತ್ರವಲ್ಲ... ವ್ಯಾಪಾರಿಗಳು, ಸಣ್ಣಪುಟ್ಟ ಕೈಗಾರಿಕೋದ್ಯಮಿಗಳು, ಕೂಲಿ ಕಾರ್ಮಿಕರು ತಮ್ಮ ಬದುಕಿನ ದಾರಿಯಲ್ಲಿ ಕಾಫಿಯನ್ನು ಅವಲಂಬಿಸಿರುವದು ನೈಜಸತ್ಯ.
ಇಡೀ ಭಾರತ ದೇಶದಲ್ಲಿ ದೇಶದ ವಾಣಿಜ್ಯ ವಹಿವಾಟಿನಲ್ಲಿ ಹೆಚ್ಚು ಲಾಭ ತಂದು ಕೊಡುವ ಕಾಫಿ ಬೆಳೆಯನ್ನು ಕೊಡಗು ಜಿಲ್ಲೆ ಪ್ರತಿನಿಧಿಸುತ್ತಿದೆ. ರಾಷ್ಟ್ರದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆ ಕರ್ನಾಟಕ ರಾಜ್ಯದ ಈ ಪುಟ್ಟ ಕೊಡಗು.
ಕಾಫಿ ಫಸಲಿಗೆ ಮುಖ್ಯವಾಗಿ ಬೇಕಾಗಿರುವದು
(ಮೊದಲ ಪುಟದಿಂದ) ಅಗತ್ಯ ಸಮಯದಲ್ಲಿ ಸಿಗಬೇಕಾದ ನೀರು. ಪ್ರಸ್ತುತ ಒಂದೆರೆಡು ವರ್ಷದಿಂದ ಜಿಲ್ಲೆ ಬರಗಾಲ ಎದುರಿಸುತ್ತಿದ್ದು, ಇಡೀ ಜಿಲ್ಲೆಯನ್ನು ಈ ಬಾರಿ ಬರಪೀಡಿತ ಎಂದು ಘೋಷಿಸಲಾಗಿದೆ. ಇಂತಹ ಪರಿಸ್ಥಿಯ ನಡುವೆ ವರುಣದೇವ ಕೊಡಗಿನ ಬಗ್ಗೆ ಕರುಣೆ ತೋರಿರುವದು ಎಲ್ಲರಲ್ಲೂ ಆಶಾಭಾವನೆ ಮೂಡಿಸಿದೆ.
ಹಿರಿಯರ ಅನುಭವಕ್ಕೂ ನಿಲುಕದ ರೀತಿಯಲ್ಲಿ ಕಾಫಿ ಬೆಳೆಗೆ ಅಗತ್ಯ ಮಳೆಯಾಗಬೇಕಾದ ಅವಧಿಗೆ ಸುಮಾರು ಹದಿನೈದು ದಿವಸ ಮುಂಚಿತವಾದರೂ ಇಡೀ ಜಿಲ್ಲೆಯಾದ್ಯಂತ ಸುರಿದಿರುವ ಮಳೆ ಯಿಂದಾಗಿ ಕೊಡಗಿನಲ್ಲಿ ಕಾಫಿಯ ಪರಿಮಳ ಆಸ್ವಾದ ನೀಡುತ್ತಿದೆ.
ಈತನಕ ಬಹುತೇಕ ತೋಟಕ್ಕೆ ಅಗತ್ಯ ಸೌಕರ್ಯ ಇರುವವರು ನೀರು ಹಾಯಿಸಿಕೊಳ್ಳುವದು ಅಥವಾ ಒಂದೊಂದು ವಿಭಾಗಕ್ಕೆ ಒಂದೊಂದು ಅವಧಿಯಲ್ಲಿ ಮಳೆಯಾಗಿ ಕಾಫಿ ಹೂ ಅರಳುತ್ತಿತ್ತು. ಆದರೆ ಈ ಬಾರಿ ಜನವರಿ 27-28 ರಂದು ಇಡೀ ಜಿಲ್ಲೆಯಾದ್ಯಂತ ಉತ್ತಮ ಮಳೆ (ಒಂದು ಇಂಚಿನಿಂದ ಸುಮಾರು ಐದು ಇಂಚು ತನಕ)ಯಾಗಿದೆ. ಇದರಿಂದಾಗಿ ಇಡೀ ಜಿಲ್ಲೆಯಲ್ಲಿ ಕಾಫಿ ಹೂ ಅರಳಿದ್ದು, ಈ ವಿಸ್ಮಯ ಬೆರಗು ಮೂಡಿಸುತ್ತಿದೆ. ಕೊಡಗಿನ ಗಡಿಯನ್ನು ಪ್ರವೇಶಿಸಿದೊಡನೆ ರಸ್ತೆಯ ಇಕ್ಕೆಲಗಳಲ್ಲಿ ಅರಳಿರುವ ಕಾಫಿ ಹೂ ಎಲ್ಲರ ಗಮನ ಸೆಳೆಯುತ್ತಿದೆ. ಮಾತ್ರವಲ್ಲದೆ ಇದರ ಪರಿಮಳ ಜೇನಿನ ಝೇಂಕಾರ ಯಾರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.
ಹತ್ತು ಹಲವಾರು ಹಿರಿಯರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಇಡೀ ಜಿಲ್ಲೆಯಲ್ಲಿ ಒಂದೇ ಸಮಯದಲ್ಲಿ ಕಾಫಿ ಹೂ ಅರಳಿರಲಿಲ್ಲ. ಈ ವರ್ಷ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಮಳೆಯಾಗಿ ಒಂದೇ ಸಮಯದಲ್ಲಿ ಕಾಫಿ ಹೂ ಅರಳಿ ತನ್ನ ಪರಿಮಳ ಬೀರುತ್ತಿರುವದು ವಿಶೇಷವಾಗಿದೆ.
ಕಾಫಿ ಕುಯಿಲಿನ ಸಂದರ್ಭ ಮಳೆ ಬೆಳೆಗಾರರಿಗೆ ತುಸು ತೊಂದರೆ ಯಾಗಿದೆ. ಇದರೊಂದಿಗೆ ಕಾರ್ಮಿಕರೂ ಕೆಲವು ದಿನಗಳಿಂದ ಕೆಲಸವಿಲ್ಲದೆ ಪರಿತಪಿಸುತ್ತಿದ್ದಾರೆ. ಆದರೂ ನೀರು ಹಾಯಿಸುವ ಅನಿವಾರ್ಯತೆ, ನೀರಿನ ಕೊರತೆ ಯಿಂದಾಗಿ ಆತಂಕ ಎದುರಿಸುತ್ತಿದ್ದ ಬೆಳೆಗಾರರು ಭವಿಷ್ಯದ ಚಿಂತನೆ ಯೊಂದಿಗೆ ತುಸು ನಿರಾಳರಾಗಿದ್ದಾರೆ.
(ಶಶಿ ಸೋಮಯ್ಯ)