ಸೋಮವಾರಪೇಟೆ, ಫೆ. 5: ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಅವ್ಯವಸ್ಥೆಯಿಂದಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿನ ರಸ್ತೆ ದಿನಂಪ್ರತಿ ಗಬ್ಬೆದ್ದು ನಾರುತ್ತಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಕೊಳಚೆ ನೀರು ಹರಿಯುತ್ತಿರುವದರಿಂದ ಕ್ಲಬ್ ರಸ್ತೆಯಲ್ಲಿರುವ ವರ್ತಕರು ಮೂಗು ಮುಚ್ಚಿಕೊಂಡು ವ್ಯಾಪಾರ ವಹಿವಾಟು ನಡೆಸುವ ಪರಿಸ್ಥಿತಿ ಎದುರಾಗಿದ್ದರೆ, ಪಾದಚಾರಿಗಳ ಪರಿಪಾಟಲೂ ಇದಕ್ಕಿಂತ ಭಿನ್ನವಾಗಿಲ್ಲ.ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಶೌಚಾಲಯದ ಗುಂಡಿ ಆಗಾಗ್ಗೆ ತುಂಬುತ್ತಿದ್ದು, ಕೊಳಚೆ ಮತ್ತು ದುರ್ನಾತ ಬೀರುವ ತ್ಯಾಜ್ಯಗಳು ರಸ್ತೆಯ ಬದಿಯಲ್ಲಿರುವ ಚರಂಡಿಯಲ್ಲಿ ಶೇಖರಣೆಯಾಗುತ್ತಿದೆ. ಪರಿಣಾಮ ಇಡೀ ಪ್ರದೇಶ ದುರ್ಗಂಧಮಯವಾಗಿದ್ದು, ಶೌಚಾಲಯ ನಿರ್ವಹಣೆ ಮಾಡುವ ಕಾರ್ಮಿಕರು ಈ ತ್ಯಾಜ್ಯವನ್ನು ಬರಿಗೈಯಲ್ಲಿ ತೆಗೆದು ರಸ್ತೆಯ ಬದಿ ಹಾಕುತ್ತಿದ್ದಾರೆ.

ಶೌಚಾಲಯದ ಗುಂಡಿ ತುಂಬಿದ ನಂತರ ಇಲ್ಲಿನ ತ್ಯಾಜ್ಯ ಕ್ಲಬ್ ರಸ್ತೆಯ ಚರಂಡಿಯಲ್ಲಿ ಹರಿದು ನೇರವಾಗಿ ಕಕ್ಕೆಹೊಳೆಯನ್ನು ಸೇರುತ್ತಿದೆ. ಚರಂಡಿಯ ಮೇಲೆ ಚಪ್ಪಡಿಯನ್ನು ಹಾಕದೇ ಇರುವದರಿಂದ ದಿನಂಪ್ರತಿ ದುರ್ನಾತ ಬೀರುತ್ತಿದೆ ಎಂದು ವರ್ತಕ ಮಧುಸೂದನ್ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕರು, ಸಂಚಾರಿ ನಿಯಂತ್ರಕರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಕ್ಲಬ್ ರಸ್ತೆಯ ನಿವಾಸಿಗಳು ದೂರಿದ್ದಾರೆ.