ಸೋಮವಾರಪೇಟೆ,ಫೆ.5: ರಾಜ್ಯ ಸರಕಾರವು ವಿವಿಧ ಇಲಾಖೆಗಳ ಮೂಲಕ ಪ್ರತೀ ವರ್ಷ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದೆ ಇರಲು ನೌಕರರ ಕೊರತೆ ಕಾರಣವಾಗಿದೆ. ಯಾವದೇ ಸರಕಾರಗಳು ಅಧಿಕಾರ ನಡೆಸಿದರೂ, ಖಾಲಿ ಉಳಿದಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವ ಪ್ರಯತ್ನ ಮಾಡಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬೈರಪ್ಪ ಹೇಳಿದರು. ತಾಲೂಕು ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ಇಲ್ಲಿನ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಸರಕಾರಿ ನೌಕರರು ಹಾಗೂ ಮುಂಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸರಕಾರಿ ಸೇವೆಯಲ್ಲಿದ್ದಾಗ ನಮ್ಮ ಉತ್ತಮ ಕೆಲಸಗಳು ನಮ್ಮನ್ನು ಕಾಪಾಡುತ್ತದೆ. ಕೇಂದ್ರ ಸರಕಾರಿ ನೌಕರರು ಈಗಾಗಲೇ 7ನೇ ವೇತನ ಆಯೋಗದ ಸೌಲಭ್ಯಗಳನ್ನು ಪಡೆದಿದ್ದಾರೆ. ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಯಾಗಿ ಮುಂದಿನ ಏಪ್ರಿಲ್ 1ಕ್ಕೆ 5ವರ್ಷ ಪೂರ್ಣಗೊಳ್ಳುತ್ತಿದೆ. ತಕ್ಷಣ ವೇತನ ಪರಿಷ್ಕರಣೆಯಾಗಬೇಕು. ಸರಕಾರಗಳು ಕೂಡ ನೌಕರರ ಸಮಸ್ಯೆಗಳಿಗೆ ಮೊದಲು ಸ್ಪಂದಿಸುವಂತಾಗಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಮಿತಿಯ ಆನಂದ್, ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬು, ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ನಿವೃತ್ತರಾದ ವಿವಿಧ ಇಲಾಖೆಗಳ ನೌಕರರಾದ ರಾಮು, ರಮೇಶ್, ಫಿಲಿಕ್ಸ್ ಅವರುಗಳನ್ನು ಮತ್ತು ಮುಂಬಡ್ತಿ ಹೊಂದಿದ ಪಶು ಸಂಗೋಪನಾ ಇಲಾಖೆಯ ಜಿ.ಎಸ್. ಚಂದ್ರಶೇಖರ್‍ರವರನ್ನು ಸನ್ಮಾನಿಸಿ ಗೌರವಿಸಲಾಯಿತು.