ಸೋಮವಾರಪೇಟೆ, ಫೆ. 5: ವಾಹನ ಚಾಲಕರು ಮತ್ತು ಮೋಟಾರ್ ಕೆಲಸಗಾರರ ಹಿತದೃಷ್ಟಿ ಯಿಂದ ಕಾರ್ಯಾಚರಿ ಸುತ್ತಿರುವ ಮೋಟಾರ್ ಯೂನಿಯನ್ ನಿಂದ ಸಂಘದ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸಲು ಮುಂದಿನ ದಿನಗಳಲ್ಲಿ ಸಹಕಾರ ಸಂಘ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಸಿ. ನಂದ ತಿಳಿಸಿದರು.ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವು ಸಮಸ್ಯೆಗಳ ನಡುವೆಯೂ ವೃತ್ತಿಯಲ್ಲಿ ಮುಂದುವರೆಯುತ್ತಿರುವ ಸಂಘದ ಸದಸ್ಯರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಸೋಮವಾರ ಪೇಟೆಯಲ್ಲಿ ಸಹಕಾರ ಸಂಘ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದರು.

ಸಂಘದ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಎಲ್ಲರೂ ಚಾಲನಾ ನಿಯಮಗಳನ್ನು ಪಾಲಿಸಬೇಕು. ಎಲ್ಲಾ ಸದಸ್ಯರು ಸಂಘಕ್ಕೆ ಕಟ್ಟಬೇಕಾದ ವಾರ್ಷಿಕ ವಂತಿಗೆಯನ್ನು ಸಕಾಲಕ್ಕೆ ಪಾವತಿ ಮಾಡಬೇಕು. ಸಂಘದ ಸದಸ್ಯರ ಹಿತವನ್ನು ಕಾಪಾಡುವ ಉದ್ದೇಶದಿಂದ ವಿಮೆ, ಅಪಘಾತ ವಿಮೆ ಹಾಗೂ ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಂಘದಿಂದ ಹೆಚ್ಚಿನ ಸಹಾಯವನ್ನು ಮಾಡುವ ದಾಗಿ ತಿಳಿಸಿದರು. ಆಕಸ್ಮಿಕವಾಗಿ ಸದಸ್ಯರು ಅನಾರೋಗ್ಯಕ್ಕೆ ತುತ್ತಾದರೆ ತಕ್ಷಣವೇ ರೂ. 2500 ನೀಡಲಾಗುವದು ಎಂದರು.

ಇದೇ ಸಂದರ್ಭ 2016ನೇ ಸಾಲಿನ ಜಮಾ ಖರ್ಚುಗಳ ವರದಿಯನ್ನು ಮಂಡಿಸಲಾಯಿತು. ಮೃತಪಟ್ಟ ಸದಸ್ಯರು ಮತ್ತು ಮೃತಪಟ್ಟ ದಾನಿಗಳಿಗೆ ಸಂತಾಪ ಸೂಚಿಸ ಲಾಯಿತು. ಸಂಘದ ಅಭಿವೃದ್ದಿಯ ಬಗ್ಗೆ ಹಲವು ಸದಸ್ಯರು ಸಲಹೆಗಳನ್ನು ನೀಡಿದರು. ಮುಂದಿನ ಸಾಲಿನಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನೂತನ ಪದಾಧಿಕಾರಿಗಳನ್ನು ವಾರ್ಷಿಕ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವಂತೆ ಸಭೆ ತೀರ್ಮಾನಿಸಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಖಜಾಂಚಿ ಖಾದರ್, ಪದಾಧಿಕಾರಿಗಳಾದ ಪರಮೇಶ್, ಶೇಖರ್, ಎ.ಕೆ. ಪ್ರಕಾಶ್, ಚೆನ್ನಪ್ಪ ಸಲಹೆಗಾರರಾದ ಎ.ಪಿ. ವೀರರಾಜು, ಟಿ.ಕೆ. ರಮೇಶ್, ಕೆ.ಜಿ. ಸುರೇಶ್, ಸುಭಾಷ್ ತಿಮ್ಮಯ್ಯ, ಇಬ್ರಾಹಿಂ ಸೇರಿದಂತೆ ಇತರರು ಉಪಸ್ಥಿತರಿದ್ದರು.