ಸೋಮವಾರಪೇಟೆ, ಫೆ.5: ಹೀಗೊಂದು ಗಾದೆ ಮಾತಿದೆ- ನಿನ್ನ ತಲೆಗೆ ನಿನ್ನದೇ ಕೈ , ಇದಕ್ಕೆ ಅಕ್ಷರಶಃ ಹೊಂದಿಕೆಯಾಗುತ್ತಿದೆ ಸೋಮವಾರಪೇಟೆ ಪಟ್ಟಣ. ಅಭಿವೃದ್ಧಿ ಎಂಬ ಪದದಿಂದ ಅದೆಷ್ಟೋ ದೂರ ನಿಂತಿರುವ, ಮೂಲಭೂತ ಸೌಕರ್ಯಗಳ ಕೊರತೆಯಲ್ಲಿ ನಲುಗಿ ಸಾಯುತ್ತಿರುವ ಪಟ್ಟಣಕ್ಕೆ ಕೊನೆ ಹನಿ ನೀರು ಬಿಟ್ಟು ಶಾಶ್ವತವಾಗಿ ಮಲಗಿಸಿದರೆ ಈ ಭಾಗದ ಮತದಾರರ ಜನ್ಮ ಪಾವನ.
ಇಲ್ಲಿನ ಸಮಸ್ಯೆ ಒಂದೆರಡಲ್ಲ.., ಇವುಗಳು ಇಂದು ನಿನ್ನೆಯ ಸಮಸ್ಯೆಗಳೂ ಅಲ್ಲ.., ಇವುಗಳನ್ನು ಬಗೆಹರಿಸಲು ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಇರುವಂತೆ ಕಂಡುಬರುತ್ತಿಲ್ಲ. ಕನಿಷ್ಟ ಪಕ್ಷ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲ. ಬಸ್ ನಿಲ್ದಾಣದಲ್ಲಿ ಆವರಣವೇ ಇಲ್ಲ.., ಸ್ಮಾರಕವಾಗಿರುವ ಶತಮಾನೋತ್ಸವ ಭವನ ಸುಂದರವಾಗುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಶೌಚಾಲಯವೂ ಇಲ್ಲ. ಕ್ರೀಡಾಪ್ರೇಮಿಗಳ ಕನಸಿನ ಆಸ್ಟ್ರೋಟರ್ಫ್ ಮೈದಾನದ ಸುದ್ದಿಯೇ ಇಲ್ಲ. ಜನಕ್ಕೊಂದು ಸಂಘವಿರುವ ಸೋಮವಾರಪೇಟೆಯಲ್ಲಿ ಪಟ್ಟಣದ ಅಭಿವೃದ್ಧಿಯ ಚಿಂತನೆ ಯಾರಲ್ಲೂಇಲ್ಲ.
ಆಂಬ್ಯುಲೆನ್ಸ್ ಇಲ್ಲದ ಆಸ್ಪತ್ರೆ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳನ್ನು ಕರೆತರಲು ಹಾಗೂ ಬೇರೆ ಆಸ್ಪತ್ರೆಗಳಿಗೆ ಸಾಗಿಸಲು ಅವಶ್ಯಕವಾಗಿರುವ ಆಂಬ್ಯುಲೆನ್ಸ್ ಸೇವೆಯೂ ಇಲ್ಲದಂತಾಗಿದೆ. ಇರುವ ಒಂದು 108 ಆಂಬ್ಯುಲೆನ್ಸ್ ಬಿಡುವಿಲ್ಲದ ಓಡಾಟ ನಡೆಸುತ್ತಿದ್ದು, ಈ ಹಿಂದೆ ಇದ್ದ ಆಸ್ಪತ್ರೆಯ ಆಂಬ್ಯುಲೆನ್ಸ್ ಓಡಾಟ ಸ್ಥಗಿತಗೊಳಿಸಿದೆ.
ಅತೀ ಹೆಚ್ಚು ಗ್ರಾಮೀಣ ಪ್ರದೇಶವನ್ನೇ ಹೊಂದಿರುವ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯನ್ನು ಸಾವಿರಾರು ಮಂದಿ ಅವಲಂಬಿಸಿದ್ದು, ಬಡಬಗ್ಗರಿಗೆ ಸೇವೆ ಮರೀಚಿಕೆಯಾಗಿದೆ. ಹಣವಂತರು ತಮ್ಮ ಸ್ವಂತ ವಾಹನದಲ್ಲಿ ಹೊರ ಭಾಗದ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಿದರೆ, ತೀರಾ ಬಡವರು ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣ ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಪ್ರಶ್ನಿಸುವವರು ಯಾರೂ
(ಮೊದಲ ಪುಟದಿಂದ) ಇಲ್ಲದಂತಾಗಿದೆ. ಹಳೆಯ ಆಂಬ್ಯುಲೆನ್ಸ್ನ ಆಯಸ್ಸು ಮುಗಿದಿದ್ದರೂ ಸಹ ನೂತನ ವಾಹನವನ್ನು ಆಸ್ಪತ್ರೆಗೆ ಕೊಡಿಸುವಲ್ಲಿ ಶಾಸಕರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಸಾಮಾಜಿಕ ಕಳಕಳಿ, ಸಮಾಜ ಸೇವೆ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆಂದೇ ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿರುವ ಸಂಘ ಸಂಸ್ಥೆಗಳಿಗೆ ಈ ಬಗ್ಗೆ ಕಣ್ಣು ಕಾಣದಿರುವದು ದುರಂತವೇ ಸರಿ.
ಈ ಹಿಂದೆ ನಗರ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲು ಸೋಮವಾರಪೇಟೆ ಬಂದ್ ಮಾಡಲಾಗಿತ್ತು. ಪಕ್ಷಬೇಧ ಮರೆತು ಸಾರ್ವಜನಿಕ ಹಿತರಕ್ಷಣಾ ಸಮಿತಿ ರಚಿಸಲಾಗಿತ್ತು. ಬಂದ್ಗೆ ಮಾತ್ರ ಸೀಮಿತವಾದ ಹಿತರಕ್ಷಣಾ ಸಮಿತಿ ಮಕ್ಕಾಡೆ ಮಲಗಿ ನಿದ್ರಿಸುತ್ತಿದೆ. ಕನಿಷ್ಟ ಪಕ್ಷ ಆಂಬ್ಯುಲೆನ್ಸ್ ಸಹ ಇಲ್ಲದ ಈ ಆಸ್ಪತ್ರೆಯ ಬಗ್ಗೆ ಯಾಕೆ ಹೋರಾಟ ನಡೆಯುತ್ತಿಲ್ಲ. ಈ ಬಗ್ಗೆ ಯಾಕೆ ಯಾವದೇ ಸಂಘಟನೆಗಳು ಬೀದಿಗಿಳಿದಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ದೇಣಿಗೆ ಸಂಗ್ರಹಿಸುವದೇ ಸೂಕ್ತ: ಸರ್ಕಾರವಂತೂ ಇಲ್ಲಿರುವಂತೆ ಕಂಡುಬರುತ್ತಿಲ್ಲ. ಶಾಸಕರೂ ಸಹ ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ.
ಮತ್ತೊಂದೆಡೆ ಬಿಜೆಪಿ ಪಕ್ಷದ ಶಾಸಕರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ಈ ಸಂದರ್ಭದಲ್ಲಿ ಜನತೆಯ ಧ್ವನಿಯಾಗಿ ನಿಲ್ಲಬೇಕಾದ ಜೆಡಿಎಸ್ ಪಕ್ಷದ ಮುಖಂಡರು ಸೋಮವಾರಪೇಟೆಯಲ್ಲಿ ನಾಪತ್ತೆಯಾಗಿದ್ದಾರೆ. ಬಡವರ ಪರವಾಗಿ ಕಳೆದ ಅನೇಕ ವರ್ಷಗಳಿಂದ ಜೆಡಿಎಸ್ ಒಂದೇ ಒಂದು ಹೋರಾಟ ನಡೆಸಿಲ್ಲ ಎಂಬದು ಗಮನಾರ್ಹ.
ಇನ್ನು ಸಂಘ ಸಂಸ್ಥೆಗಳ ಬಗ್ಗೆ ಹೇಳುವದಾದರೆ ಅತಿರಥ ಮಹಾರಥರೇ ಇಲ್ಲಿದ್ದಾರೆ, ಕೆಲವೊಂದು ಸಂಘಟನೆಗಳ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯ ಸಂಚಾಲಕ, ರಾಜ್ಯಾಧ್ಯಕ್ಷರೇ (ಪತ್ರಿಕಾಗೋಷ್ಠಿ ಮತ್ತು ಇನ್ನಿತರ ಪ್ರತಿಭಟನೆ ಸಂದರ್ಭ ಮಾತ್ರ ಇವರ ಹುದ್ದೆ) ಇಲ್ಲಿದ್ದಾರೆ. ಗಲ್ಲಿಗೊಂದರಂತೆ ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದ ಸಂಘಟನೆಗಳ ಅಧ್ಯಕ್ಷರೂ ಇಲ್ಲಿದ್ದಾರೆ. ಆದರೆ ಆಂಬ್ಯುಲೆನ್ಸ್ಗಾಗಿ ಹೋರಾಟ ಮಾಡಬೇಕೆಂಬ ಮನಸ್ಸು ಯಾರಿಗೂ ಬಂದಿಲ್ಲ.
ಕಳೆದ 6 ತಿಂಗಳಿನಿಂದ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲ. ಬಡಬಗ್ಗರಿಗೆ ವೈದ್ಯಕೀಯ ಸೇವೆಯೂ ಲಭಿಸುತ್ತಿಲ್ಲ. ಈ ಹಿಂದೆ ಇದ್ದ ಆಂಬ್ಯಲೆನ್ಸ್ ಸಂಚಾರಕ್ಕೆ ಯೋಗ್ಯವಲ್ಲ ಎಂದು ಆರ್ಟಿಓ ಅಧಿಕಾರಿಗಳೇ ದೃಢೀಕರಿಸಿದ್ದಾರೆ. ಆದರೂ ನೂತನ ವಾಹನ ಬಂದಿಲ್ಲ. ಜನಪ್ರತಿನಿಧಿಗಳಂತೂ ಈ ಬಗ್ಗೆ ಚಿಂತಿಸುತ್ತಿಲ್ಲ. ಸಾರ್ವಜನಿಕವಾಗಿ ಯಾರಾದರೂ ದೇಣಿಗೆ ಸಂಗ್ರಹಿಸಿ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಒದಗಿಸಿದರೆ ಬಡಬಗ್ಗರ ಜೀವ ಉಳಿಯುತ್ತದೆ. ಈ ಬಗ್ಗೆ ಚಿಂತಿಸುವವರು ಸೋಮವಾರಪೇಟೆಯಲ್ಲಿ ಇದ್ದಾರೋ ಇಲ್ಲವೋ..!?
- ವಿಜಯ್ ಹಾನಗಲ್