ಶ್ರೀಮಂಗಲ, ಫೆ. 5: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಮೂರು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 39 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಹಾಗೂ ಸ್ಟವ್‍ಗಳನ್ನು ವಿತರಿಸಲಾಯಿತು.ಸೌಲಭ್ಯ ವಿತರಿಸಿ ಮಾತನಾಡಿದ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಅವರು, ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹುದಿಕೇರಿ, ಬೇಗೂರು, ಹೈಸೊಡ್ಲೂರು ಗ್ರಾಮದ 39 ಫಲಾನುಭವಿಗಳನ್ನು ಮೊದಲ ಹಂತದಲ್ಲಿ ಆಯ್ಕೆಮಾಡಲಾಗಿದ್ದು, ತಲಾ 5400 ರಂತೆ 39 ಫಲಾನುಭವಿಗಳಿಗೆ 14ನೇ ಹಣಕಾಸಿನ ಯೋಜನೆಯಡಿ ಮೀಸಲಾಗಿರುವ ಶೇಕಡ 25 ಅನುದಾನದಂತೆ ರೂ 2 ಲಕ್ಷ 10 ಸಾವಿರ ಅನುದಾನದಲ್ಲಿ ಗ್ಯಾಸ್ ವಿತರಿಸಲಾಗಿದೆ. ಗ್ರಾ.ಪಂ. ಸದಸ್ಯ ಮೀದೇರಿರ ನವೀನ್ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಹಲವಾರು ಪಲಾನುಭವಿಗಳು ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮೊದಲ ಹಂತದಲ್ಲಿ 39 ಫಲಾನುಭವಿಗಳಿಗೆ ಅನುದಾನ ಲಭ್ಯತೆ ಮೇರೆಗೆ ಸೌಲಭ್ಯ ನೀಡಲಾಗಿದೆ. ಮುಂದಿನ ಹಂತದಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವದೆಂದು ಹೇಳಿದರು. ಗ್ರಾ.ಪಂ. ಸದಸ್ಯ ಚಂಗುಲಂಡ ಸೂರಜ್ ಮಾತನಾಡಿ, ಎಸ್.ಸಿ., ಎಸ್.ಟಿ ಜನಾಂಗದವರು ತಮ್ಮ ಜೀವನ ಮಟ್ಟವನ್ನು ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಕೊಳ್ಳಲು ಸರಕಾರ ಹಲವಾರು ಸೌಲಭ್ಯ ವನ್ನು ಪ್ರಕಟಿಸಿದೆ. ಅದರಂತೆ ಅಡುಗೆ ಅನಿಲ ಸಿಲಿಂಡರ್, ಸ್ಟವ್‍ಗಳನ್ನು ನೀಡಿದ್ದು, ಇವುಗಳ ಉಪಯೋಗಿಸುವ ಬಗ್ಗೆ ಜಾಗೃತಿ ವಹಿಸಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಮಾತನಾಡಿ, ಎಸ್.ಸಿ., ಎಸ್.ಟಿ ಮೀಸಲಾತಿ ಅನುದಾನವನ್ನು ಕಡ್ಡಾಯವಾಗಿ ವಿನಿಯೋಗಿಸಬೇಕು. ಸರಕಾರ ಅನುದಾನ ನೀಡಿದರೂ ಬಳಸದೆ ಇದ್ದರೆ ಸರಕಾರದ ಯೋಜನೆ ಅನುಷ್ಠಾನವಾಗದೆ ಹಿಂದುಳಿದ ವರ್ಗ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಎಸ್.ಇ. ಎಸ್.ಟಿ. ಅನುದಾನವನ್ನು ವಿನಿಯೋಗಿಸದಿದ್ದರೆ ಸಂಬಂಧಪಟ್ಟ ಪಿ.ಡಿ.ಒ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲು ಅವಕಾಶವಿದೆ ಎಂದು ವಿವರಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಯುತ್ತನ್, ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ, ಸದಸ್ಯರುಗಳಾದ ಮತ್ರಂಡ ಸೋಮಣ್ಣ, ಎಂ. ಬಿಂದು, ಹೆಚ್.ಆರ್.ಗೊಂಬೆ, ಜೇನುಕುರುಬರ ಗಂಗಮ್ಮ, ಪಿ.ಡಿ.ಒ. ಕೆ.ಎಂ. ಹರೀಶ್, ಕಾರ್ಯದರ್ಶಿ ಹೆಚ್.ಟಿ. ಸುರೇಶ್, ಸಾರ್ವಜನಿಕ ಪ್ರಮುಖ ಮತ್ರಂಡ ಸುಕು ಬೋಪಣ್ಣ, ಗ್ರಾ.ಪಂ. ಮಾಜಿ ಸದಸ್ಯ ಸಾದಲಿ, ಪೊನ್ನಂಪೇಟೆಯ ಇಂಡಿಯನ್ ಗ್ಯಾಸ್ ವಿತರಣಾ ಸಂಸ್ಥೆಯ ಮಾಲೀಕ ಹ್ಯಾರೀಸ್, ತಾ.ಪಂ. ಮಾಜಿ ಸದಸ್ಯ ಸಾಜಿ ಅಚ್ಯುತ್ತನ್ ಹಾಜರಿದ್ದರು.