ಕುಶಾಲನಗರ, ಫೆ. 5: ರಸ್ತೆ ದಾಟುವ ಸಂದರ್ಭ ಅಪಘಾತಕ್ಕೆ ಒಳಗಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ತೀವ್ರ ಗಾಯಗೊಂಡ ಘಟನೆ ಸಮೀಪದ ಬೈಲುಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಬೈಲುಕೊಪ್ಪೆಯ ನಿವಾಸಿಯಾದ ಹೃತಿಕ್ ಗೌಡ (17) ಎಂಬಾತ ಮೃತಪಟ್ಟಿದ್ದು ಅಜಯ್ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ವಾಹನ ಪರಾರಿ ಯಾಗಿದ್ದು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಒಂದೇ ಕುಟುಂಬದ ಸದಸ್ಯರಾಗಿದ್ದು ರಜಾ ದಿನವಾದ ಭಾನುವಾರ ಬೆಳಗ್ಗೆ 9 ಗಂಟೆ ವೇಳೆಗೆ ತಮ್ಮ ಜಾನುವಾರುಗಳನ್ನು ಹೊಲಕ್ಕೆ ಬಿಟ್ಟು ಹಿಂತಿರುಗುತ್ತಿದ್ದ ಸಂದರ್ಭ ಬೈಲುಕೊಪ್ಪೆಯ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ವಾಹನದ ರಭಸಕ್ಕೆ ಇಬ್ಬರು ರಸ್ತೆಯಿಂದ ಎಸೆಯಲ್ಪಟ್ಟಿದ್ದಾರೆ. ಹೃತಿಕ್ ಗೌಡ ಆಸ್ಪತ್ರೆಗೆ ತರುವ ಸಂದರ್ಭವೇ ಮೃತಪಟ್ಟಿರುವದಾಗಿ ಕುಶಾಲನಗರ ಸರಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಅಜಯ್ (15) ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಯಿತು. ಮೃತ ಹೃತಿಕ್ ಗೌಡ ಬೈಲುಕೊಪ್ಪೆಯ ಉದಯಕುಮಾರ್ ಎಂಬವರ ಏಕಮಾತ್ರ ಪುತ್ರನಾಗಿದ್ದು ಕುಶಾಲನಗರ ಸಮೀಪದ ಗುಡ್ಡೆಹೊಸೂರಿನ ಐಶ್ವರ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ತನ್ನ ಚಿಕ್ಕಪ್ಪ ಬಸವರಾಜು ಪುತ್ರ ಅಜಯ್ನೊಂದಿಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಅಜಯ್ ಸಮೀಪದ ಭಾರತ್ಮಾತ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಅತಿವೇಗದ ವಾಹನ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿರುವ ಬಗ್ಗೆ ಬೈಲುಕೊಪ್ಪ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ವಾಹನದ ತುಣುಕೊಂದು ಸ್ಥಳದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಅಪಘಾತಕ್ಕೆ ಕಾರಣವಾದ ವಾಹನದ ಸುಳಿವು ದೊರೆಯಲಿದೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲುಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.