ಸೋಮವಾರಪೇಟೆ,ಫೆ.6: ರಾಜ್ಯದಲ್ಲಿನ ಬಹುತೇಕ ಪೋಷಕರು ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ಅದರಲ್ಲೂ ಆಂಗ್ಲ ಮಾಧ್ಯಮದಲ್ಲೇ ಓದಬೇಕೆಂಬ ಹಠಕ್ಕೆ ಬಿದ್ದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ನಿಂತಿದೆ ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಆಯೋಜಿಸಿದ್ದ ಏಳನೇ ವರ್ಷದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದಿಸಲು ಮುಂದಾಗದ ಕನ್ನಡಾಭಿಮಾನಿಗಳಿಂದ ಕನ್ನಡ ಭಾಷೆಯ ಏಳಿಗೆ ಸಾಧ್ಯವಿಲ್ಲ. ಕಳೆದ 17ನೇ ವರ್ಷಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಆರಂಭಿಸದಿದ್ದಲ್ಲಿ ಪ್ರಸ್ತುತ ಕನ್ನಡದ ಪರಿಸ್ಥಿತಿ ಶೋಚನೀಯ ವಾಗಿರುತ್ತಿತ್ತು. ನಿರಂತರ ಹೋರಾಟದ ಮೂಲಕ ಕನ್ನಡದ ಉಳಿವಿಗೆ ಮುಂದಾಗಿರುವ ನಾರಾಯಣ ಗೌಡರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ವೇಂಕಟೇಶ್ ಪೂಜಾರಿ ಮಾತನಾಡಿ, ರಾಜ್ಯದಲ್ಲಿ 9ಲಕ್ಷಕ್ಕೂ ಅಧಿಕ ಕರವೇ ಸದಸ್ಯರು ಕನ್ನಡದ ಕೆಲಸಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪಿಎಸ್‍ಐ ಅನೂಪ್ ಮಾದಪ್ಪ, ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ.ಶರತ್‍ಬಾಬು, ಚಾಲಕ ಮೂರ್ತಿ, ನಿವೃತ್ತ ಸೈನಿಕ ನಾಸಿರ್, ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಬಾಲ ಪ್ರತಿಭೆಗಳಾದ ಸಿಂಚನ, ಎಂ.ಯು.ಶ್ರಾವಣಿ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕರವೇ ಜಿಲ್ಲಾ ಸಂಚಾಲಕ ನಾಗೇಗೌಡ, ತಾಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ಮಾನವಹಕ್ಕು ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಅನಂತ್‍ಕುಮಾರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಸಿ.ನಂದ, ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಡಾಲ್ಫಿನ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಅಶೋಕ್, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಅವಿಲಾಷ್, ಭೂಪಾಲ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕರವೇ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್ ವಹಿಸಿದ್ದರು. ರಾಣಿ ರವೀಂದ್ರ ಸ್ವಾಗತಿಸಿ, ಕೆ.ಪಿ. ರವೀಶ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ 16 ತಂಡಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.