ಬೆಂಗಳೂರು, ಫೆ. 6: ಕೊಡಗು ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಕೋರಿ ಇಂದು ಜಿ.ಪಂ. ಹಾಗೂ ಶಾಸಕರಾದಿಯಾಗಿ ರಾಜ್ಯದ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿದ್ದು, ಜಿಲ್ಲೆಗೆ ಅನುದಾನ ಒದಗಿಸುವ ಬಗ್ಗೆ ಸರಕಾರದಿಂದ ಭರವಸೆ ದೊರೆತಿದೆ.ಜಿ.ಪಂ. ಸರ್ವ ಸದಸ್ಯರುಗಳ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಒಂದು ಸದಸ್ಯರುಗಳು ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, 2016-17ನೇ ಸಾಲಿಗೆ ರೂ. 2943.85 ಲಕ್ಷ ಹೆಚ್ಚುವರಿ ಕ್ರಿಯಾಯೋಜನೆ ಸೇರಿದಂತೆ ಒಟ್ಟು 4263.85 ಲಕ್ಷಗಳ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ.ಸಾಮಾನ್ಯವಾಗಿ ಗೃಹಕಚೇರಿ ಕೃಷ್ಣದಲ್ಲಿ ಸಾರ್ವಜನಿಕರು ಭೇಟಿ ಮಾಡುವ ಮುಖ್ಯಮಂತ್ರಿಗಳು ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಕೊಡಗಿನ ಪ್ರತಿನಿಧಿಗಳನ್ನು ಭೇಟಿ ಮಾಡಿ ಕಾವೇರಿ ನಾಡಿನ ಬಗ್ಗೆ ಹೆಚ್ಚಿನ ಉತ್ಸುಕತೆ ತೋರಿದ್ದಾರೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

ಇದರೊಂದಿಗೆ ನೀರಾವರಿ ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿದ ನಿಯೋಗ ನೀರಾವರಿಗೂ ಅನುದಾನ ಬಿಡುಗಡೆ ಮಾಡುವಂತೆ ಕೋರಿದೆ. ಇದಕ್ಕೂ ಕೂಡ ಸಚಿವರು ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳಾದ ಚಂದ್ರಕಲಾ, ಪ್ರಥ್ಯು, ಬೋಪಣ್ಣ, ವಿಜು ಸುಬ್ರಮಣಿ, ಶಶಿ ಸುಬ್ರಮಣಿ, ಮುರಳಿ, ಮಂಜುಳಾ, ಶಾಸಕರುಗಳಾದ

ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ ಪದ್ಮಿನಿ ಪೊನ್ನಪ್ಪ ಇನ್ನಿತರರು ಉಪಸ್ಥಿತರಿದ್ದರು.