ಮಡಿಕೇರಿ ಫೆ.6 : ವೀರಾಜಪೇಟೆ ತಾಲೂಕಿನ ಮಲೆ ತಿರಿಕೆ ಬೆಟ್ಟದಲ್ಲಿರುವ ಶ್ರೀ ಮಲೆಮಹದೇಶ್ವರ ದೇವಸ್ಥಾನದ ಜಮೀನಿನ ಸುಮಾರು 1 ಏಕರೆ ಪ್ರದೇಶವÀನ್ನು ಕಾನೂನು ಬಾಹಿರವಾಗಿ ಸೈಂಟ್ ಆನ್ಸ್ ಪಾರಿಶ್ ಪ್ರೀಸ್ಟ್‍ರವರು ಮಂಜೂರಾತಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ದೇವಸ್ಥಾನದ ಟ್ರಸ್ಟಿಗಳು, ಯಾವದೇ ಕಾರಣಕ್ಕೂ ದೇವಾಲಯದ ಜಾಗವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಾಟೇರಿರ ಎಸ್.ಪೂವಯ್ಯ, ಸರ್ವೇ ಸಂಖ್ಯೆ 300/65 ರಲ್ಲಿ 1 ಎಕರೆ ಪೈಸಾರಿ ಜಾಗವನ್ನು ಕಾನೂನು ಬಾಹಿರವಾಗಿ ತಮ್ಮ ವಶಕ್ಕೆ ಪಡೆಯಲು ಸೈಂಟ್ ಆನ್ಸ್ ಪ್ಯಾರಿಶ್ ಪ್ರೀಸ್ಟ್ ಅವರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಗ್ರಾಮದಲ್ಲಿರುವ ಮಲೆ ಮಹದೇಶ್ವರ ದೇವಾಲಯ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಪ್ರತಿ ವರ್ಷ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಮಗ್ಗುಲ ಗ್ರಾಮದ ಮೂಲ ಸರ್ವೇ ಸಂಖ್ಯೆ 300/30 ರಲ್ಲಿ ಒಟ್ಟು 64.40 ವಿಸ್ತೀರ್ಣವಿದ್ದು, ಇದು ಪೈಸಾರಿ ಜಾಗವಾಗಿದೆ. ಮೂಲ ಸರ್ವೇ ಸಂಖ್ಯೆಯಿಂದ ಅನೇಕರಿಗೆ ಜಾಗ ಮಂಜೂರಾಗಿದ್ದು, ಪಕ್ಕದಲ್ಲೆ ಇರುವ ಸರ್ವೇ ಸಂಖ್ಯೆ 295 ರಲ್ಲಿ 3.73 ಎಕರೆ ಪೈಸಾರಿ ಜಾಗವಿದೆ. ಈ ಜಾಗದಲ್ಲಿ ಮಲೆ ತಿರಿಕೆ ಈಶ್ವರ ದೇವಸ್ಥಾನವಿದೆ. ಸರ್ವೇ ಸಂಖ್ಯೆ 300/65 ರಲ್ಲಿ 1 ಎಕರೆ ಪೈಸಾರಿ ಜಾಗವನ್ನು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಏಕ ಪಕ್ಷೀಯವಾಗಿ ಮಂಜೂರಾತಿ ಮಾಡಿಸಿಕೊಂಡಿರುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಧಾರ್ಮಿಕ ಸಾಮರಸ್ಯವಿದ್ದು, ದೇವಾಲಯದ ವಾರ್ಷಿಕ ಪೂಜಾ ಕಾರ್ಯದಲ್ಲಿ ಎರಡೂ ಧರ್ಮೀಯರು ಸೌಹಾರ್ದ ತೆಯಿಂದ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಜಾಗದ ವಿವಾದದಿಂದಾಗಿ ಸಂಘರ್ಷಗಳು ಏರ್ಪಡುವ ಸಾಧ್ಯತೆಗಳಿರುವದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೈಂಟ್ ಆನ್ಸ್ ಪ್ಯಾರಿಶ್ ಪ್ರೀಸ್ಟ್ ಅವರ ಜಾಗ ಮಂಜೂರಾತಿಯನ್ನು ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು. ವಿವಾದವನ್ನು ಬಗೆಹರಿಸಲು ಜಿಲ್ಲಾಡಳಿತಕ್ಕೆ 15 ದಿನಗಳ ಗಡುವು ನೀಡಿದ ಅವರು, ಹೋರಾಟವನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಇತರ ಟ್ರಸ್ಟಿಗಳು ಮಾತನಾಡಿ, ಶಾಸಕರ ಉಪಸ್ಥಿತಿಯಲ್ಲಿ ಸಂಧಾನ ಮಾತುಕತೆ ನಡೆದಿದ್ದು, ಸೈಂಟ್ ಆನ್ಸ್ ಪ್ಯಾರಿಶ್ ಪ್ರೀಸ್ಟ್ ಅವರಿಗೆ 1 ಏಕರೆ ಜಾಗವನ್ನು ಬೇರೆಡೆ ಗುರುತಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ಇಲ್ಲಿಯವರೆಗೆ ನಡೆದಿಲ್ಲವೆಂದು ಆರೋಪಿಸಿದರು. ಯಾವದೇ ಕಾರಣಕ್ಕೂ ದೇವಾಲಯದ ಜಾಗವನ್ನು ಬಿಟ್ಟುಕೊಡಲು ಸಾಧ್ಯವಿಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಖಜಾಂಚಿ ಪಿ.ಎಂ.ಗಣಪತಿ, ಕಾರ್ಯದರ್ಶಿ ಬಿ.ಎಂ.ಪ್ರಕಾಶ್, ದೇವಾಲಯದ ತಕ್ಕರಾದ ಅಜ್ಜಿನಿಕಂಡ ಪ್ರಭು ಮೊಣ್ಣಯ್ಯ, ನಿರ್ದೇಶಕರುಗಳಾದ ಕುಂಡ್ರಂಡ ಬೋಪಣ್ಣ ಹಾಗೂ ಚಾರಿಮಂಡ ನಾಚಪ್ಪ ಉಪಸ್ಥಿತರಿದ್ದರು.