ಭಾಗಮಂಡಲ, ಫೆ. 6: ವಿರೋಧ ಪಕ್ಷದ ಬಗ್ಗೆ ಎಂದೂ ವಿರೋಧವಾಗಿ ಮಾತಾಡದೆ ರಾಜಕೀಯ ಮಾಡಬಹುದೆಂದು ತೋರಿಸಿಕೊಟ್ಟವರು ಬಿ.ಟಿ. ಪ್ರದೀಪ್ ಆಗಿದ್ದಾರೆ ಎಂದು ರಾಜಕೀಯ ವಿಶ್ಲೇಷಣೆಗಾರರು ಹಾಗೂ ನ್ಯಾಯವಾದಿ ನವನೀತ್ ಪಿ.ಇಂಗಣಿ ಅಭಿಪ್ರಾಯಪಟ್ಟರು.
ಭಾಗಮಂಡಲ ಗೌಡ ಸಮಾಜದಲ್ಲಿ ಕುಂದಚೇರಿ, ಅಯ್ಯಂಗೇರಿ ಹಾಗೂ ಕರಿಕೆ ವಲಯ ಕಾಂಗ್ರೆಸ್ ಸಮಿತಿ ಭಾಗಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಟಿ. ಪ್ರದೀಪ್ ಅವರ ಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೊಡಗಿನ ರಾಜಕೀಯಕ್ಕೆ ಹೊಸ ದಿಕ್ಕು ಅಲ್ಲದೆ ಸ್ನೇಹ, ಪ್ರೀತಿಯಿಂದ ರಾಜಕೀಯ ನಡೆಸಬಹುದು. ಜಾತಿವಾದಿಗಳಾಗದೆ ಎಲ್ಲಾ ಸಮಾಜಗಳ ಪ್ರೀತಿಸುವ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನೆರವಂಡ ಉಮೇಶ್ ಮಾತನಾಡಿ, ಬದುಕು, ಬದಕಲು ಬಿಡು ಎಂಬ ತತ್ವವನ್ನು ಪ್ರದೀಪ್ ಆಗಿದ್ದರು. ಕಾಂಗ್ರೆಸ್ ಪಕ್ಷವನ್ನು ಪ್ರೀತಿಸುವ ಯಾವದೇ ಸಂಘಟನೆಗಳಿಲ್ಲ. ಆದರೆ ಇತರ ಪಕ್ಷಗಳಿಗೆ ಬೆಂಬಲಿಸುವ ಸಂಘಟನೆಗಳಿವೆ. ಆದ್ದರಿಂದ ಪ್ರದೀಪ್ ಅವರ ರಾಜಕೀಯ ಕನಸು ನನಸಾಗಬೇಕೆಂದರೆ ವಾವೆಲ್ಲ ಒಂದಾಗಿ ಶ್ರಮಿಸಬೇಕೆಂದರು.
ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಪ್ರದೀಪ್ ಎಲ್ಲರನ್ನೂ ಗೌರವದಿಂದ ಗೌರವಿಸುವ ವ್ಯಕ್ತಿಯಾಗಿದ್ದರು. ಅವರ ಒಂದಿಷ್ಟು ಗುಣವನ್ನು ತೆಗೆದುಕೊಂಡು ಪಕ್ಷವನ್ನು ಕಟ್ಟಿ ಬೆಳೆಸೋಣವೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್ ಮಾತನಾಡಿ, ಮುಂದೆ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡು ನಮಿಸುವದೇ ನಮ್ಮ ಆದ್ಯ ಕರ್ತವ್ಯವಾಗಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಪತ್ರವೋ ಮಾತನಾಡಿ, ಪ್ರದೀಪ್ ಅವರು ಪಕ್ಷದ ಶಕ್ತಿಯಾಗಿದ್ದರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವೆಂದರು.
ಈ ಸಂದರ್ಭ ದೇವಂಗೋಡಿ ಹರ್ಷ, ಲವ ಚಿಣ್ಣಪ್ಪ, ಗಿರೀಶ್, ಕೆದಂಬಾಡಿ ಋಷಿಕುಮಾರ್, ಸುರೇಂದ್ರ, ರಮೇಶ್, ಕರಿಕೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್, ಹ್ಯಾರೀಶ್, ರವಿ ಹೆಬ್ಬಾರ್, ಕುದುಪಜೆ ಪ್ರಕಾಶ್, ಕೀರ್ತಿಕುಮಾರ್, ನಾಳಿಯಂಡ ಚಂಗಪ್ಪ ಹಾಗೂ ಇನ್ನಿತರರು ಇದ್ದರು.