ಸೋಮವಾರಪೇಟೆ,ಫೆ.6: ಅರೇಬಿಕಾ ಕಾಫಿಯನ್ನು ಅತೀ ಹೆಚ್ಚು ಬೆಳೆಯಲಾಗುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಯಾವದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.ಜನವರಿ 28 ಹಾಗೂ 29 ರಂದು ಸೋಮವಾರಪೇಟೆ ತಾಲೂಕಿನ ಬಹುತೇಕ ಭಾಗಗಳಲ್ಲಿ20 ಸೆಂಟ್ಸ್ ನಿಂದ 400 ಸೆಂಟ್ಸ್ (5 ಮಿ.ಮೀ. ನಿಂದ 100 ಮಿ.ಮೀ.-4ಇಂಚು) ಮಳೆಯಾಗಿದೆ. ಇದರಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಬ್ಯಾಕಿಂಗ್ (ಹೆಚ್ಚುವರಿ ನೀರು) ಕೊಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇದ್ದಾರೆ. ಈ ಮಳೆ ಕಾಫಿಗೆ ತುಂಬಾ ಮುಂಚಿತವಾಗಿ ಬಂದಿರುವದರಿಂದ ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿರುವ ದಿಲ್ಲ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಎಚ್.ಆರ್. ಮುರುಳೀಧರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಅರೇಬಿಕಾ ಕಾಫಿ ಮೊಗ್ಗುಗಳು ಬಲಿತು ಅರಳಲು ಸಿದ್ಧವಾಗಲು ಕೊನೆಯ ಮಳೆಯ ನಂತರ ಕನಿಷ್ಟ 90 ದಿನಗಳ ಕಾಲದ ತೇವಾಂಶದ ಕೊರತೆಯ ಒತ್ತಡದ ಅಗತ್ಯವಿದೆ. ರೊಬಸ್ಟಾದಲ್ಲಿ ಈ ಪ್ರಕ್ರಿಯೆಗೆ ಕನಿಷ್ಟ 45 ದಿನಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
2016 ರ ಡಿಸೆಂಬರ್ ಎರಡನೇ ವಾರದಲ್ಲಿ ಬಂದ ಉತ್ತಮ ಮಳೆಯಿಂದಾಗಿ, ಅರೇಬಿಕಾದಲ್ಲಿ ಮೊಗ್ಗುಗಳು ಇನ್ನೂ ಪರಿಪೂರ್ಣವಾಗಿ ಬೆಳೆದಿರುವದಿಲ್ಲ. ಹಾಗಾಗಿ 100 ಸೆಂಟ್ಸ್‍ಗಿಂತ (25 ಮಿ.ಮೀ.) ಕಡಿಮೆ ಮಳೆ ಆಗಿರುವ ಪ್ರದೇಶಗಳ ಅರೇಬಿಕಾ ತೋಟಗಳಲ್ಲಿ ಮೊಗ್ಗುಗಳು ಅರಳುವ ಸಾಧ್ಯತೆಗಳಿಲ್ಲ. ಇದಕ್ಕೂ ಹೆಚ್ಚಿನ ಮಳೆಯಾದ ಪ್ರದೇಶಗಳ ತೋಟಗಳಲ್ಲಿ ಶೇ. 5-10 ರಷ್ಟು ಮೊಗ್ಗುಗಳು ಅರಳಬಹುದು. ಹಾಗೆಯೇ, ಅರೇಬಿಕಾ ತೋಟಗಳಲ್ಲಿ ನೆರಳು ಚೆನ್ನಾಗಿದ್ದಲ್ಲಿ ಬ್ಯಾಕಿಂಗ್ ನೀರಾವರಿ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಸಮಯದಲ್ಲಿ ಬ್ಯಾಕಿಂಗ್ ನೀರು ಕೊಟ್ಟಲ್ಲಿ ಅರೇಬಿಕಾ ಗಿಡಗಳಿಗೆ ಮೊಗ್ಗುಗಳು ಬಲಿಯಲು ಬೇಕಾದ ಕನಿಷ್ಟ 90 ದಿನಗಳ ತೇವಾಂಶದ ಕೊರತೆಯ ಒತ್ತಡವನ್ನು ನೀಡಿದಂತಾ ಗದೆ ಮುಂದಿನ ಹೂ ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಬೆಳೆಗಾರರು ಮಾರ್ಚ್ - ಏಪ್ರಿಲ್ ತಿಂಗಳವರೆಗೆ ನಿರಾತಂಕವಾಗಿ ಹೂ ಮಳೆಗೆ ಕಾಯಬಹುದು ಎಂದು ಸಲಹೆ ನೀಡಿದ್ದಾರೆ.
ರೋಬಸ್ಟಾ ಗಿಡಗಳಿಗೆ ನೀರು ಕೊಡಬಹುದು. ರೊಬಸ್ಟಾ ಗಿಡಗಳಲ್ಲೂ ಕೂಡ ಎಲ್ಲಾ ಮೊಗ್ಗುಗಳು ಸಂಪೂರ್ಣವಾಗಿ ಬಲಿತಿರುವದಿಲ್ಲ. ಆದ್ದರಿಂದ, ಈಗಿನ ಮಳೆಗೆ ಶೇ. 40-50 ರಷ್ಟು ಹೂವಾಗಿದೆ. ಈ ಫಸಲನ್ನು ಉಳಿಸಿಕೊಳ್ಳಲು 100 ಸೆಂಟ್ಸ್‍ಗಿಂತ ಕಡಿಮೆ ಮಳೆ ಬಂದಿರುವ ಪ್ರದೇಶ ಗಳಲ್ಲಿ ನೀರಾವರಿ ವ್ಯವಸ್ಥೆ ಇರುವ ಬೆಳೆಗಾರರು ಬ್ಯಾಕಿಂಗ್ ನೀಡಬೇಕು. ನೆರಳು ಉತ್ತಮವಾಗಿದ್ದು, ಹೆಚ್ಚು ಮಳೆ ಬಂದ ಪ್ರದೇಶಗಳಲ್ಲಿ ಮತ್ತೊಂದು ಸುತ್ತಿನ ನೈಸರ್ಗಿಕ ಹೂಮಳೆ ಹಾಗೂ ಬ್ಯಾಕಿಂಗ್ ಮಳೆಗೆ ಕಾಯಬಹುದಾಗಿದೆ ಎಂದರು.
ಈ ನಡುವೆ, ಕಾಫಿ ಕೊಯ್ಲು ನಡೆಸುತ್ತಿರುವ ಬೆಳೆಗಾರರು ಹೂವಾದ ತೋಟಗಳಲ್ಲಿ ಹೂಗಳ ಪರಾಗಸ್ಪರ್ಶ ಮುಗಿದ ನಂತರ ಕಾಫಿ ಕೊಯ್ಲು ಆರಂಭಿಸಬಹುದು. ಹೆಚ್ಚಿನ ಮಾಹಿತಿ ಗಾಗಿ ಸೋಮವಾರಪೇಟೆ ಅಥವಾ ಹತ್ತಿರದ ಯಾವದೇ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿ ಸಬಹುದು ಎಂದು ಮುರಳೀಧರ್ ತಿಳಿಸಿದ್ದಾರೆ.