ಮಡಿಕೇರಿ, ಫೆ.6 : ಕರ್ನಾಟಕ ಬುಡಕಟ್ಟು ಅಧ್ಯಯನ ಸಂಸ್ಥೆಯ ಮೂಲಕ ನಡೆಯುತ್ತಿದ್ದ ಕೊಡವರ ಕುಲ ಶಾಸ್ತ್ರ ಅಧ್ಯಯನ ಕಾರ್ಯಕ್ಕೆ ಅಡ್ಡಿಯನ್ನು ಉಂಟು ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ನಾಪೋಕ್ಲು ಕೊಡವ ಸಮಾಜ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಪ್ರಯತ್ನದ ಫಲವಾಗಿ ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸಲು ಕೊಡವ ಕುಲ ಶಾಸ್ತ್ರ ಅಧ್ಯಯನ ಆರಂಭವಾಗಿತ್ತಾದರೂ ಎ.ಕೆ.ಸುಬ್ಬಯ್ಯ ಅವರು ಇದಕ್ಕೆ ತಡೆಯೊಡ್ಡಿದರೆಂದು ಆರೋಪಿಸಿದರು.ಕೊಡವರನ್ನು ಬುಡಕಟ್ಟು ಕುಲಕ್ಕೆ ಸೇರಿಸುವದಕ್ಕೆ ಪೂರಕವಾಗಿ ಸರ್ವೇ ಕಾರ್ಯವನ್ನು ಮುಂದುವರಿಸ ಬೇಕೆಂದ ಅವರು, ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿದರು.

ಸಿಎನ್‍ಸಿ ಸಂಘಟನೆಯ ನಿರಂತರ ಹೋರಾಟದಿಂದ 2016 ನ.16 ರಿಂದ ಕೊಡವರ ಅಧ್ಯಯನ ಕಾರ್ಯ ಆರಂಭವಾಗಿತ್ತು. ಆದರೆ, ಕೆಲವರು ಪಿತೂರಿಯಿಂದ ಮುಖ್ಯಮಂತ್ರಿಗಳು ಮೌಖಿಕ ಆದೇಶ ನೀಡಿ ಅಧ್ಯಯನಕ್ಕೆ ತಡೆ ನೀಡುವದರ ಮೂಲಕ ಕೊಡವರ ಭವಿಷ್ಯವನ್ನೆ ಹಾಳು ಮಾಡಲು ಯತ್ನಿಸಲಾಗಿದೆ ಎಂದು ರಮೇಶ್ ಆರೋಪಿಸಿದರು.

ಮೀಸಲಾತಿ ಪಟ್ಟಿಯಲ್ಲಿ ರಾಜ್ಯಾಂಗದ ಖಾತ್ರಿ ಇಲ್ಲದೆ ಕೊಡವರು ಅತಂತ್ರ ಸ್ಥಿತಿಗೆ ತಲಪಿದ್ದಾರೆ. ಜನಾಂಗದ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಕೆಲವೇ ವರ್ಷಗಳಲ್ಲಿ ಕೊಡವ ಜನಾಂಗ ಅಳಿದು ಹೋಗುವ ಅಪಾಯವಿದೆ. ಬುಡಕಟ್ಟು ಕುಲವೆಂದು ಅಧಿಕೃತವಾಗಿ ಘೋಷಿಸಿದಾಗ ಮಾತ್ರ ಕೊಡವರಿಗೆ ಉಳಿಗಾಲವಿದೆ ಎಂದು ಅಭಿಪ್ರಾಯಪಟ್ಟರು. ಇದನ್ನು ಸಾಕಾರಗೊಳಿಸುವದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ರಮೇಶ್ ಚಂಗಪ್ಪ ತಿಳಿಸಿದರು.

ಬುಡಕಟ್ಟು ಕುಲದ ಮಾನದಂಡಗಳಾದ ತಮ್ಮದೇ ಆದ ಕೊಡವ ತಕ್ಕ್, ಒಕ್ಕ, ಮದುವೆ, ಹುಟ್ಟು, ಸಾವು, ಶವ ಸಂಸ್ಕಾರ, ಹಬ್ಬ ಲಾವಣಿ ನೃತ್ಯ, ಜನಪದೀಯ ಬೇಟೆ, ಸಮರ ಕಲೆಯಲ್ಲಿ ನಿರತರಾಗಿರುವದರಿಂದ ಕೊಡವರು ಸಂವಿಧಾನದ ಬುಡಕಟ್ಟು ಶೆಡ್ಯೂಲ್‍ಗೆ ಸೇರ್ಪಡೆಗೊಳ್ಳಲು ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ರಮೇಶ್ ಚಂಗಪ್ಪ ಅಭಿಪ್ರಾಯಪಟ್ಟರು.

ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಬೇಕೆನ್ನುವ ಸಿಎನ್‍ಸಿ ಕೂಗಿಗೆ ನಾಪೋಕ್ಲು ಕೊಡವ ಸಮಾಜದ ಬೆಂಬಲವಿದೆ ಎಂದ ಅವರು, ಕುಲ ಶಾಸ್ತ್ರ ಅಧ್ಯಯನಕ್ಕೆ ಸರ್ಕಾರ ಮರು ಚಾಲನೆ ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಳೆಯಂಡ ಎ. ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ ಚಂಗಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ನಿರ್ದೇಶಕರು ಗಳಾದ ಮುಕ್ಕಾಟಿರ ವಿನಯ ಹಾಗೂ ಚೋಕೀರ ಸಜಿ ಉಪಸ್ಥಿತರಿದ್ದರು.