ಮಡಿಕೇರಿ, ಫೆ. 6: ಯಾವದೇ ಸಂಘ - ಸಂಸ್ಥೆಗಳು ಸ್ಥಾಪನೆ ಗೊಳ್ಳುವದು ಮುಖ್ಯವಲ್ಲ. ಸ್ಥಾಪನೆಗೊಳ್ಳುವಂತಹ ಸಂಘ - ಸಂಸ್ಥೆಗಳು ಸದಾ ಕ್ರೀಯಾಶೀಲವಾಗಿ ರಬೇಕು. ಹಾಗಾದಾಗ ಮಾತ್ರ ಅವುಗಳ ಉಳಿವು ಸಾಧ್ಯ ಎಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾತೃ - ಪಿತೃ, ಗುರು, ಸಮಾಜ ಈ ನಾಲ್ಕರ ಋಣ ಪ್ರತಿಯೊಬ್ಬರ ಮೇಲಿರುತ್ತದೆ. ಈ ಋಣವನ್ನು ತೀರಿಸುವದು ಪ್ರತಿಯೊಬ್ಬರ ಸಂಕಲ್ಪ ವಾಗಬೇಕು. ವಾಣಿಜ್ಯೋದ್ಯಮಿಗಳ ಸಹಕಾರ ಸಂಘ ಕೇವಲ ಸಾಲ ಕೊಡುವದಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆಯಲ್ಲ. ಸಮಾಜ ಮುಖಿಯಾಗಿ ಕೆಲಸ ಮಾಡುವದೇ ಸಹಕಾರ ಸಂಘದ ಮೂಲ ಉದ್ದೇಶ. ಸ್ಥಾನಮಾನಗಳು ಸ್ವಾರ್ಥಕ್ಕೆ ಬಳಕೆಯಾಗಬಾರದು. ಪರರ ಹಿತಕ್ಕಾಗಿ ಸತ್‍ಚಿಂತನೆಯಿಂದ ಕೆಲಸ ಮಾಡುವಂತಾಗಬೇಕೆಂದು ರಾಜೇಂದ್ರ ಅವರು ಸಲಹೆಯಿತ್ತರು.

ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಿದ ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಮಾತನಾಡಿ, ವ್ಯಾಪಾರಸ್ಥರ ಅನುಕೂಲಕ್ಕಾಗಿ ವಾಣಿಜ್ಯೋದ್ಯಮಿಗಳ ಸಹಕಾರ ಸಂಘ ಸ್ಥಾಪನೆಯಾಗಿದ್ದು, ವರ್ತಕರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಅತಿಥಿ ಗೃಹವನ್ನು ಉದ್ಘಾಟಿಸಿದ ಸಂಘದ ಉಪಾಧ್ಯಕ್ಷ ಜಿ.ಎ. ಉದಯ, ನಾಮಫಲಕ ಅನಾವರಣ

(ಮೊದಲ ಪುಟದಿಂದ) ಮಾಡಿದ ಮಾಜಿ ಅಧ್ಯಕ್ಷ ಬಾಬುಚಂದ್ರ ಉಳ್ಳಾಗಡ್ಡಿಯವರು ಮಾತನಾಡಿ, ವಾಣಿಜ್ಯೋದ್ಯಮಿಗಳ ಸಹಕಾರ ಸಂಘ ಹೆಮ್ಮರವಾಗಿ ಬೆಳೆದಿದ್ದು, ಅನೇಕರಿಗೆ ಉಪಯುಕ್ತವಾಗಿದೆ ಎಂದರು. ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ನೂತನ ಕಟ್ಟಡದಲ್ಲಿ ಸದಸ್ಯರಿಗೆ ಹಾಗೂ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಭಾಂಗಣವೊಂದನ್ನು ಕೂಡ ನಿರ್ಮಿಸಲಾಗಿದ್ದು, ಪ್ರಸ್ತುತ ಸಂಘದ 1865 ಮಂದಿ ಸದಸ್ಯರಿದ್ದಾರೆ. ವ್ಯಾಪಾರೀಕರಣ ಮಾತ್ರ ಸಂಘದ ಉದ್ದೇಶವಾಗಿರದೆ ಸಮಾಜಕ್ಕೂ ತನ್ನಿಂದಾದ ಸೇವೆಯನ್ನು ಸಂಘ ಮಾಡಲಿದೆ ಎಂದು ಹೇಳಿದರು. ಸಂಘದ ಸಭಾಂಗಣವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಉದ್ಘಾಟಿಸಿದರು.

ಈ ಸಂದರ್ಭ ದಾನಿಗಳಾದ ಸಯ್ಯದ್, ಹಿರಿಯ ಸಹಕಾರಿಯಾದ ವೆಂಕಟೇಶ್ ಪೈ, ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ. ರಾಜೇಂದ್ರ, ನಾಗೇಂದ್ರ ಪ್ರಸಾದ್, ಬಾಬುಚಂದ್ರ ಉಳ್ಳಾಗಡ್ಡಿ, ಕೆ.ಬಿ. ಗಿರೀಶ್ ಗಣಪತಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಹಕಾರ ಸಂಘದ ಉಪ ನಿಬಂಧಕ ಜಿ.ಆರ್. ವಿಜಯಕುಮಾರ್, ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ನಿರ್ದೇಶಕರಾದ ಬಿ.ಎನ್. ಪ್ರಕಾಶ್ ನಿರೂಪಿಸಿ, ಸವಿತಾ ರೈ ಪ್ರಾರ್ಥಿಸಿ, ಮುನೀರ್ ಅಹ್ಮದ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಶ್ಯಾಮಲ ವಂದಿಸಿದರು.