ಚೆಟ್ಟಳ್ಳಿ, ಫೆ. 6: ಕೊಡಗಿನ 10 ಸಾಕಾನೆಗಳು ಸೇರಿದಂತೆ ರಾಜ್ಯದಿಂದ ಒಟ್ಟು 12 ಸಾಕಾನೆಗಳನ್ನು ಉತ್ತರಾಖಂಡ್‍ಗೆ ರವಾನಿಸಲು ತಯಾರಿ ನಡೆಯುತ್ತಿದ್ದು, ಜಿಲ್ಲೆಯ ವಿವಿಧ ಆನೆ ಸಾಕಾನೆ ಶಿಬಿರಗಳಿಂದ ಮತ್ತಿಗೋಡು ಆನೆ ಶಿಬಿರಕ್ಕೆ ಇಂದು ಸಾಗಾಟಗೊಳಿಸುವ ಕಾರ್ಯ ನಡೆದಿದೆ.ಉತ್ತರಾಖಂಡ್‍ನಲ್ಲಿ ಅರಣ್ಯ ಕಾವಲು ಕಾರ್ಯಕ್ಕಾಗಿ ಬಳಸಿಕೊಳ್ಳಲು ಈ ಆನೆಗಳನ್ನು ರವಾನಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ. ಎರಡು ಸರ್ಕಾರಗಳ ಉನ್ನತ ಮಟ್ಟದ ಮಾತುಕತೆಯಲ್ಲಿ ಈ ಆನೆ ಸಾಗಾಟ ಕುರಿತು ನಿರ್ಧಾರ ಕೈಗೊಂಡಿರುವದಾಗಿ ‘ಶಕ್ತಿ’ಗೆ ತಿಳಿದು ಬಂದಿದೆ.ವೀರಾಜಪೇಟೆ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಅವರ ಪ್ರಕಾರ ರಾಜ್ಯದ ವಿವಿಧ ಆನೆ ಶಿಬಿರಗಳಲ್ಲಿ ಲಭ್ಯವಿರುವ 12 ಆನೆಗಳ ಪೈಕಿ 6 ಗಂಡಾನೆಗಳು, 4 ಹೆಣ್ಣಾನೆಗಳು ಹಾಗೂ 2 ಹೆಣ್ಣು ಮರಿ ಆನೆಗಳನ್ನು ಮಂಗಳವಾರ ಉತ್ತರಾಖಂಡ್‍ಗೆ ಸಾಗಾಟಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೊಡಗಿನಿಂದ ಸಾಗಾಟಗೊಳ್ಳಲಿರುವ 10 ಆನೆಗಳ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.

ಮತ್ತಿಗೋಡು ಆನೆ ಶಿಬಿರದಿಂದ ಹೆಣ್ಣಾನೆ ತುಂಗ (15), ತುಂಗಾಳ ಮರಿ ಹೆಣ್ಣಾನೆ (1.8ವರ್ಷ) ಹಾಗೂ ಗಂಡಾನೆಗಳಾದ ಕರ್ಣ (6) ಮತ್ತು ಭೀಷ್ಮ (9), ದೊಡ್ಡಹರವೆ ಶಿಬಿರದಿಂದ ಗಂಡಾನೆಗಳಾದ ಮದಕರಿ (10), ಗಜರಾಜ (10) ಹಾಗೂ ಹೆಣ್ಣಾನೆ ಕೆಂಚಾಂಬ (20), ದುಬಾರೆ ಆನೆ ಶಿಬಿರದಿಂದ ಹೆಣ್ಣಾನೆಗಳಾದ ಶಿವಗಂಗೆ (25), ಕಪಿಲ (32) ಹಾಗೂ ಕಸಿಲಾಳ ಹೆಣ್ಣು ಮರಿಯಾನೆ (1.8 ವರ್ಷ)

ಇದಲ್ಲದೆ ಬೆಂಗಳೂರು ಬನ್ನೇರುಘಟ್ಟ ಶಿಬಿರದಿಂದ ಹೆಣ್ಣಾನೆಗಳಾದ ರೂಪ (8) ಹಾಗೂ ಮನೆಕಾ (26) ಆನೆಗಳು ಸೇರಿದಂತೆ ಒಟ್ಟು 12 ಆನೆಗಳನ್ನು ಕರ್ನಾಟಕದಿಂದ ಉತ್ತರಾಖಂಡ್‍ಗೆ ರವಾನಿಸಲಾಗುತ್ತಿದೆ. ಇಂದು ದುಬಾರೆಯಿಂದ 3 ಆನೆಗಳನ್ನು ದುಬಾರೆ ಹೊಳೆಯಲ್ಲಿ ಮಜ್ಜನ ಮಾಡಿಸಿ ಬೆಳಗ್ಗಿನ ಉಪಹಾರವಾದ ಭತ್ತ, ಅಕ್ಕಿ, ಜೋಳ ತಿನ್ನಿಸಿ ಆನೆ ಶಿಬಿರದಿಂದ ಬೆಳಿಗ್ಗೆ ಬೀಳ್ಕೊಡ ಲಾಯಿತು. ಮಾವುತರು ಹಾಗೂ ಕಾವಾಡಿಗರು ಈ ಆನೆಗಳನ್ನು ಕಾಲ್ನಡಿಗೆಯಲ್ಲಿ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೊಯ್ದರು.

ದುಬಾರೆ ಆನೆ ಶಿಬಿರದಲ್ಲಿ ಉತ್ತಮ ತರಬೇತಿ ಹೊಂದಿ ಆಯ್ಕೆ ಮಾಡಲಾದ ಆನೆಗಳನ್ನು ಮೇಲಧಿಕಾರಿಗಳ ಆದೇಶದನ್ವಯ ಉತ್ತರಾಖಂಡ್‍ಗೆ ಕಳುಹಿಸಲಾಗುತ್ತಿದೆ ಎಂದು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮಾಹಿತಿಯಿತ್ತಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ