ಮಡಿಕೇರಿ, ಫೆ. 6: ‘‘ಕಾಶ್ಮೀರದಿಂದ ಮಂಡ್ಯ..., ಹ್ಯಾಟ್ಸ್ ಆಫ್ ಮೈ ಇಂಡಿಯಾ...’’, ಇದು ಯಾವದೇ ಸಿನಿಮಾ ‘ಡೈಲಾಗ್’ ಅಲ್ಲ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿಮೈದಾನದಲ್ಲಿಂದು ಏರ್ಪಡಿಸಲಾಗಿದ್ದ ‘ಭಾರತ ಭಾಗ್ಯವಿದಾತ’ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ಕೇಳಿಬಂದ ಗೀತೆಯೊಂದರ ಸಾಲು ಇದು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಅಂಬೇಡ್ಕರ್ ಅವರ ಬದುಕು ಸಾಧನೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಲಾವಿದರು ಹಾಡು, ನೃತ್ಯಗಳ ಮೂಲಕ ಭಾರತದ ಭವ್ಯ ಪರಂಪರೆ, ಅಂಬೇಡ್ಕರ್ ಅವರ ಸಾಧನೆಯನ್ನು ಜಗಮಗಿಸುವ ಬೆಳಕಿನ ವ್ಯವಸ್ಥೆಯಿದ್ದ ಭವ್ಯ ವೇದಿಕೆಯಲ್ಲಿ ನೃತ್ಯರೂಪಕದ ಮೂಲಕ ಪ್ರಸ್ತುತಪಡಿಸಿ ಜನಮನಸೂರೆಗೊಂಡರು. ಮಾತನಾಡು ಭೂತ ಮಾತನಾಡು... ನೀರ್ ಕೇಳಿದ್ರೆ ಜಾತಿ ಅಂದಾರೋ.., ಕೇಳೋತಮ್ಮ ಮನುಷ್ಯ ದುಡಿಮೆಯ ಮರ್ಮ ಎಂಬಿತ್ಯಾದಿ ಹತ್ತು ಹಲವು ಅರ್ಥಪೂರ್ಣ ಹಾಡುಗಳಿಗೆ ವಿಭಿನ್ನ ವೇಷಭೂಷಣ ಧರಿಸಿ ನರ್ತಿಸಿ ನೋಡುಗರ ಗಮನ ಸೆಳೆದರು.ಈ ಹಿಂದೆ ಭಾರತದಲ್ಲಿದ್ದಂತಹ ಜೀತ ಪದ್ಧತಿ ನಂತರದ ವರ್ಷಗಳಲ್ಲಿ ಜಾರಿಯಾದ ಕಾರ್ಮಿಕ ನೀತಿ, ಭವ್ಯ ಭಾರತದಲ್ಲಿರುವ ವೈವಿಧ ್ಯಮಯ ದೈವಿಕ ಆಚರಣೆಗಳು, ದೇಶ-ವಿದೇಶಗಳಲ್ಲಿ ಅಂಬೇಡ್ಕರ್ ಅವರುಗಳಿಸಿದ್ದ ಖ್ಯಾತಿ ಅವರ ವಿಶೇಷತೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕಲಾವಿದರ ದಂಡು ವೇದಿಕೆಯಲ್ಲಿ ಪ್ರದರ್ಶಿಸಿದ ನೃತ್ಯ ವೈವಿದ್ಯ ನೆರೆದಿದ್ದವರನ್ನು ಮಂತ್ರಮುಗ್ಧ ರನ್ನಾಗಿಸಿತು.ಉದ್ಘಾಟನೆ: ಈ ಒಂದು ಅಪರೂಪದ ಕಾರ್ಯಕ್ರಮವನ್ನು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಬಿ.ಜಿ. ಅನಂತಶಯನ, ವಾರ್ತಾಧಿಕಾರಿ ಚಿನ್ನಸ್ವಾಮಿ ಪಾಲ್ಗೊಂಡಿದ್ದರು.