ಮಡಿಕೇರಿ, ಫೆ. 7: ದಡಾರ - ರುಬೆಲ್ಲಾ ಗಂಭೀರ ಖಾಯಿಲೆಗಳಾಗಿದ್ದು, 2020ರೊಳಗೆ ಈ ಕಾಯಿಲೆಯನ್ನು ದೇಶದಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭಗೊಂಡ ಲಸಿಕಾ ಅಭಿಯಾನ ತಾ. 28ರವರೆಗೆ ಮುಂದುವರೆಯಲಿದೆ. ಜಿಲ್ಲೆಯಲ್ಲಿ 1,29,247 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಓ. ಶ್ರೀರಂಗಪ್ಪ ಮಾಹಿತಿ ನೀಡಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಲಸಿಕಾ ಅಭಿಯಾನವನ್ನು 21 ದಿನಗಳ ಕಾಲ ಕೈಗೊಳ್ಳಲಾಗಿದ್ದು, 9 ರಿಂದ 15ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ಹಾಕಲಾಗುವದು. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಪಾಂಡಿಚೇರಿ ಹಾಗೂ ಲಕ್ಷ ದ್ವೀಪಗಳಲ್ಲಿ ಈ ಅಭಿಯಾನವನ್ನು ಆಯೋಜಿಸಿದೆ. ದಡಾರ ಮತ್ತು ರುಬೆಲ್ಲಾ ಕಾಯಿಲೆಯನ್ನು ತಡೆಗಟ್ಟಲು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಡಾ. ಪ್ರಕಾಶ್ ಮಾತನಾಡಿ, ಲಸಿಕಾ ಅಭಿಯಾನದ ವಿರುದ್ಧ ಕೆಲವರು ಅಪಪ್ರಚಾರ, ಗಾಳಿ ಸುದ್ಧಿಯನ್ನು ಹಬ್ಬಿಸಿದ್ದಾರೆ. ಒಂದು ಸಮುದಾಯದ ಕೆಲವರು ಲಸಿಕಾ ಅಭಿಯಾನದ ವಿರುದ್ಧ ತಪ್ಪು ಮಾಹಿತಿ ರವಾನೆಯಾಗಿದೆ.
(ಮೊದಲ ಪುಟದಿಂದ) ಆ ಸಮಾಜದ ಪ್ರಮುಖರೊಂದಿಗೆ ತಾ. 8 ರಂದು ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿ ಶೇ. 100ರಷ್ಟು ಗುರಿ ಸಾಧನೆ ಮಾಡಲಾಗುವದು ಎಂದರು.
ತಪ್ಪು ಮಾಹಿತಿಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅವರ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಲಸಿಕಾ ಕೇಂದ್ರಗಳಿಗೆ ತೆರಳಿ ತಪ್ಪು ಮಾಹಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ನಗರದ ಸಂತ ಜೋಸೆಫರ ಕಾನ್ವೆಂಟ್‍ನಲ್ಲಿ 50ಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತಮ್ಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅವರೊಂದಿಗೆ ಸಮಾಲೋಚಿಸಿ ತಪ್ಪು ಮಾಹಿತಿಯನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.
ಇನ್ನೋರ್ವ ಅಧಿಕಾರಿ ಡಾ. ನಿಲೇಶ್ ಮಾತನಾಡಿ, ದೇಶದಲ್ಲಿ ದಡಾರ ಹಾಗೂ ರುಬೆಲ್ಲಾ ಖಾಯಿಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಭಿಯಾನ ಕೈಗೊಂಡಿದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವದೇ ಅಡ್ಡ ಪರಿಣಾಮಗಳಿಲ್ಲ. ಲಸಿಕೆ ಹಾಕುವವರಿಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ, ತರಬೇತಿ ಕೈಗೊಳ್ಳಲಾಗಿದೆ. ಊಹಾಪೋಹಗಳಿಗೆ ಯಾರೂ ಕೂಡ ಕಿವಿಗೊಡದೆ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸುವಂತೆ ಸಲಹೆ ಮಾಡಿದರು.
ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸಲ್ಮಾ ಮಾತನಾಡಿ, ದಡಾರ ಮತ್ತು ರುಬೆಲ್ಲಾ ದೊಡ್ಡ ಖಾಯಿಲೆಯಾಗಿದ್ದು, ರುಬೆಲ್ಲಾದಿಂದ ಅಂಗವೈಕಲ್ಯತೆ ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಅಬ್ದುಲ್ ಅಜೀಜ್ ಇದ್ದರು.