ಕೊಡ್ಲಿಪೇಟೆ, ಫೆ. 7 : ಸುತ್ತಲೂ ಗವ್ವನೆಯ ಕತ್ತಲು. ಶಾಲೆಯ ಕ್ರೀಡಾಂಗಣದ ನೆಲದಲ್ಲೇ ಕಾದು ಕುಳಿತ ಜನರ ಎದುರು ಕತ್ತಲು-ಬೆಳಕಿನ ಯಕ್ಷ ಲೋಕದ ದಿಗ್ದರ್ಶನ... ನಾಟಕವೆಂದರೆ ಒಂದು ರಂಗಮಂಟಪ ಎಂದುಕೊಂಡು ಬಂದ ಪ್ರೇಕ್ಷಕರಿಗೆ ಬರೋಬ್ಬರಿ ಹದಿಮೂರು ಸ್ಟೇಜ್‍ಗಳಲ್ಲಿ ಮಾಯಾಲೋಕವನ್ನೇ ಸೃಷ್ಟಿಸಿ ನೆರೆದವರ ಹುಬ್ಬೇರಿಸಿದ ಪುಟಾಣಿಗಳು! ನಾಟಕದ ನಟರಿಗಷ್ಟೇ ಅಲ,್ಲ ಕುಳಿತ ಪ್ರೇಕ್ಷಕರಿಗೂ ಮೂರು ತಾಸು ಪುರುಸೋತ್ತು ಇಲ್ಲದಷ್ಟು ಕೆಲಸ!! ತಮ್ಮೆದುರಿಗಿನ ಒಂದು ದೃಶ್ಯ ಮುಗಿಯಿತು ಎನ್ನುವಷ್ಟರಲ್ಲಿ ಐವತ್ತು ಮಾರು ಪಶ್ಚಿಮಕ್ಕೆ ಥಟ್ಟನೆ ತೆರೆದುಕೊಳ್ಳುವ ಎರಡನೆ ದೃಶ್ಯ... ಅದೂ ಮುಗಿಯಿತು ಅನ್ನುವಷ್ಟರಲ್ಲಿ ಅಷ್ಟೂ ಪ್ರೇಕ್ಷಕರು ಸಂಪೂರ್ಣ ಪೂರ್ವಕ್ಕೆ ತಿರುಗಬೇಕು- ಅಲ್ಲಿ ಮೂರನೇ ದೃಶ್ಯ... ನಂತರ ಉತ್ತರ, ಹಾಗೆಯೇ ದಕ್ಷಿಣ... ಹೀಗೆ ‘ದಶದಿಕ್ಕು’ಗಳಲ್ಲೂ ಒಂದು ನಾಟಕದ ವಿರಾಟ್ ಸ್ವರೂಪದ ದರ್ಶನ!! ಯಾವದೋ ಸಾಮಾನ್ಯ ನಾಟಕವಿರ ಬೇಕೆಂದು ಬಂದ ಐನೂರಕ್ಕೂ ಮೀರಿದ ಪ್ರೇಕ್ಷಕರು ನಾಟಕ ಅರ್ಧ ಮುಗಿಯುವಷ್ಟರಲ್ಲೇ ಪಾದರಸವನ್ನೇ ನಾಚಿಸುವಂತಿದ್ದ ಆ ಪುಟಾಣಿಗಳ ತಾಕತ್ತಿಗೆ ಶರಣು ಶರಣಾರ್ಥಿ ಎಂದಿದ್ದರು. ಇಷ್ಟು ಹೇಳಿದ ಮಾತ್ರಕ್ಕೆ ಈ ನಾಟಕ ನಡೆದದ್ದು ಕಾನ್ವೆಂಟ್ ನಲ್ಲೋ ಅಥವಾ ಇಂಟರ್‍ನ್ಯಾಶನಲ್ ಶಾಲೆಯಲ್ಲೋ ಎಂದುಕೊಂಡರೆ ನೀವು ಶತ-ಪ್ರತಿಶತ ತಪ್ಪಿದಂತೆ!

ಹೌದು, ಏಕೆಂದರೆ ಇಂತಹ ಕಿನ್ನರ ಲೋಕವೊಂದು ಕೊಡಗಿನ ಉತ್ತರ ಗಡಿಯಾದ ಬೆಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ತೆರೆದುಕೊಂಡಿತ್ತು. ಇಡೀ ಕರ್ನಾಟಕದ ಯಾವ ಶಿಕ್ಷಣ ಸಂಸ್ಥೆಯೂ ಬಹುಶÀಃ ಇದುವರೆಗೆ ಮಾಡದ ನಾಟಕದ ಸಾಧನೆ ಮಾಡಿ ತೋರಿಸಿದ್ದು ಗ್ರಾಮೀಣ ಕನ್ನಡ ಮಾಧ್ಯಮದ ಮಕ್ಕಳ ಪ್ರತಿಭೆ! ನಾಟಕದ ಹೆಸರು “ವಿಶ್ವವಿಜೇತ ವಿವೇಕಾನಂದ”. ಶಾಲೆಯ ಎದುರಿಗಿನ ಕ್ರೀಡಾಂಗಣದಲ್ಲಿ ಸೃಷ್ಟಿಸಲಾಗಿದ್ದ ಹದಿಮೂರು ರಂಗಮಂಟಪಗಳಲ್ಲಿ ಪುಟಾಣಿಗಳು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಕತ್ತಲೆ-ಬೆಳಕಿನ ರಂಗೋಲಿಯಾಟದ ಮೂಲಕ ಪ್ರದರ್ಶಿಸಿದರು. ಶಾಲೆಯ 53 ವಿದ್ಯಾರ್ಥಿಗಳು ವಿವೇಕಾನಂದರನ್ನು ರಂಗದ ಮೇಲೆ ಮತ್ತೊಮ್ಮೆ ಮರು ಸೃಷ್ಟಿಸಿದರು. ನಾಟಕದಲ್ಲಿ ಆರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಪಾತ್ರಕ್ಕೆ ಜೀವ ನೀಡಿದರು. ಸ್ವಾಮಿ ವಿವೇಕಾನಂದರÀ ಜನನ, ಬಾಲ್ಯ, ಯೌವನ, ರಾಮಕೃಷ್ಣ ಪರಮಹಂಸರ ಭೇಟಿ, ಖೇತ್ರಿ ರೈಲು ನಿಲ್ದಾಣ, ಮಂಗಲ್ ಸಿಂಗ್ ಪ್ರಸಂಗ, ಕ್ಯಾಥರೀನ್ ಸ್ಯಾನ್‍ಬಾನ್ ಮನೆಯ ಘಟನೆ, ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನ ಹಾಗೂ ಅವತಾರ ಸಮಾಪ್ತಿ ಮೊದಲಾದ ಇಪ್ಪತ್ತು ದೃಶ್ಯಗಳಿಗೆ ಮಕ್ಕಳು ಸಾಕ್ಷಿಯಾದರು. ವಿದ್ಯಾರ್ಥಿನಿಯರಿಂದ ವಿವೇಕಾನಂದರ ಜೀವನಕ್ಕೆ ಸಂಬಂಧಿಸಿದ ಎರಡು ನೃತ್ಯಗಳು ನೆರೆದವರ ಮನಸೂರೆ ಗೊಂಡವು. ಚಿಕಾಗೋದ ವಿಶ್ವಧರ್ಮ ಸಮ್ಮೇಳನದ ದೃಶ್ಯ ನೆಲವನ್ನು ಬಿಟ್ಟು ಆಕಾಶ ಮಧ್ಯದಲ್ಲಿ- ಎಂದರೆ ಶಾಲಾ ಕಟ್ಟಡದ ತಾರಸಿಯ ಮೇಲೆ ಕಾಣಿಸಿದಾಗಲಂತೂ ನೆರೆದ ಪ್ರೇಕ್ಷಕರ ಕರತಾಡನ ಮತ್ತೊಮ್ಮೆ ಚಿಕಾಗೋದ ವೈಭವವನ್ನೇ ನೆನಪಿಸಿತು. ಶಾಲೆಯ ಸಮಸ್ತ ಶಿಕ್ಷಕ ವರ್ಗ ಹಾಗೂ ಬೆಸೂರು ಪರಿಸರದ ಅನೇಕ ದಾನಿಗಳ ಸಹಕಾರದಿಂದ ನಾಟಕ ಯಶಸ್ವಿಯಾಗಿ ನಡೆಯಿತು. ಬೆಸೂರಿನ ಸ್ವಯಂ ಸೇವಕರಾದ ದೇವೇಂದ್ರ ಬಿ.ಎಸ್. ಹಾಗೂ ಗಂಗಾಧರ್ ಬಿ.ಆರ್ ಸಂಪೂರ್ಣ ನಿಸ್ವಾರ್ಥ ಸೇವೆ ಸಲ್ಲಿಸಿದರು. ಬೆಸೂರು ಪ್ರೌಢ ಶಾಲೆಯ ಅಧ್ಯಾಪಕ ಸುರೇಶ್ ಮರಕಾಲ ಅವರ ಪರಿಕಲ್ಪನೆ ರಚನೆ ಹಾಗೂ ನಿರ್ದೇಶನದಲ್ಲಿ “ವಿಶ್ವವಿಜೇತ ವಿವೇಕಾನಂದ” ನಾಟಕ ಒಂದು ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಯಿತು.