ಮಡಿಕೇರಿ, ಫೆ. 7 : ದಡಾರ -ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ ದೊರೆಯಿತು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ಒಂಬತ್ತು ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆ ಹಾಕುವ ಅಭಿಯಾನವು 21 ದಿನಗಳ ಕಾಲ ನಡೆಯಲಿದೆ. ಈ ಅಭಿಯಾನಕ್ಕೆ ಸಾರ್ವಜನಿಕರು, ಪೋಷಕರು ಸಹಕರಿಸುವಂತೆ ಕೋರಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಅವರು ದಡಾರ - ರುಬೆಲ್ಲಾ ಅಭಿಯಾನ ಬಗ್ಗೆ ಹಲವು ಮಾಹಿತಿ ನೀಡಿ ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರ ಹೆಚ್ಚಿನದ್ದಾಗಿದೆ ಎಂದು ಹೇಳಿದರು. ಆರ್‍ಸಿಎಚ್ ಅಧಿಕಾರಿ ಡಾ.ನಿಲೇಶ್ ಅವರು ಈಶಾನ್ಯ ಏಷ್ಯಾ ಖಂಡದ ದೇಶಗಳ ಸಂಕಲ್ಪದಂತೆ ಭಾರತ ದೇಶವು 2020ರ ವೇಳೆಗೆ ದಡಾರ ನಿರ್ಮೂಲನೆ ಹಾಗೂ ರುಬೆಲ್ಲಾ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ 2017 ರ ಫೆಬ್ರವರಿ ತಿಂಗಳಲ್ಲಿ ದಡಾರ-ರುಬೆಲ್ಲಾ ಲಸಿಕಾ ಅಭಿಯಾನ ಆಯೋಜಿಸಲಾಗಿದೆ. ಈ ಲಸಿಕಾ ಅಭಿಯಾನದಲ್ಲಿ 9 ತಿಂಗಳ ವಯಸ್ಸಿನಿಂದ
(ಮೊದಲ ಪುಟದಿಂದ) 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಒಂದು ದಡಾರ-ರುಬೆಲ್ಲಾ ಲಸಿಕೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು.
ಪ್ರಥಮವಾಗಿ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರ ಆರಂಭಿಸಲಾಗುವದು ಎಂದು ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜ ಮಾತನಾಡಿ ಮೂಢನಂಬಿಕೆಗಳಿಗೆ ಬಲಿಯಾಗದೇ ದಡಾರ ರುಬೆಲ್ಲಾ ಲಸಿಕೆಯನ್ನು ಒಂಬತ್ತು ತಿಂಗಳ ವಯಸ್ಸಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳು ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ ಮಾತನಾಡಿ ಆಧುನಿಕ ಯುಗದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂಬತ್ತು ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳು ದಡಾರ- ರುಬೆಲ್ಲಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು 2020ಕ್ಕೆ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜಿ.ಪಂ.ಸಿಇಓ ಚಾರುಲತಾ ಸೋಮಲ್, ರಾಜ್ಯ ನೋಡಲ್ ಅಧಿಕಾರಿ ಡಾ.ಪ್ರಕಾಶ, ತಹಶೀಲ್ದಾರ್ ಕುಸುಮ. ತಾಲೂಕು ವೈದ್ಯಾಧಿಕಾರಿಗಳು, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶ್ರುಶ್ರೂಷಕರು, ಎ.ಎನ್.ಎಂ.ಗಳು ಇತರರು ಇದ್ದರು.
ಗೋಣಿಕೊಪ್ಪಲು : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾದಿಯರಿಗೆ ಲಸಿಕಾ ಕಿಟ್ ವಿತರಿಸುವ ಮೂಲಕ ದಡರಾ ಮತ್ತು ರುಬೆಲ್ಲಾ ತಾಲೂಕು ಅಭಿಯಾನಕ್ಕೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಮಗುವಿನ ಆರೋಗ್ಯ ದೃಷ್ಟಿಯಿಂದ ಪೋಷಕರು ಚುಚ್ಚು ಮದ್ದನ್ನು ಕಡ್ಡಾಯವಾಗಿ ಕೊಡಿಸಬೇಕು. ಸಂದೇಹಗಳಿಗೆ ಒಳಗಾಗದೆ ಮಕ್ಕಳಿಗೆ ಚುಚ್ಚು ಮದ್ದು ಕೊಡಿಸಿ. ಮಗುವಿನ ಸದೃಢ ಆರೋಗ್ಯಕ್ಕೆ ಈ ಲಸಿಕೆ ಪ್ರಯೋಜನಕಾರಿಯಾಗಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದರು.
ಡಾ. ಚಂದ್ರಶೇಖರ್ ಮಾತನಾಡಿ, ಚುಚ್ಚು ಮದ್ದಿನ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿರುವದು ಉತ್ತಮ ಬೆಳವಣಿಗೆಯಲ್ಲ. ಈ ಲಸಿಕೆಯಿಂದ ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ ಯಾವದೇ ಅಡ್ಡ ಪರಿಣಾಮಗಳಾಗುವದಿಲ್ಲ ಎಂದರು.
ಈ ಸಂದರ್ಭ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಕಿರಣ್ ರಾಯ್ ಪಡ್ನೇಕರ್, ಗೋಣಿಕೊಪ್ಪ ರೋಟರಿ ಅಧ್ಯಕ್ಷ ನರೇಂದ್ರ, ಕುಟ್ಟಂದಿ ವೈದ್ಯಾಧಿಕಾರಿ ಅನಿತಾ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.
ಸೋಮವಾರಪೇಟೆ
ದಡಾರ ಹಾಗೂ ರುಬೆಲ್ಲಾ ಕಾಯಿಲೆಗಳನ್ನು 2020ರೊಳಗೆ ದೇಶದಿಂದ ಸಂಪೂರ್ಣ ನಿರ್ಮೂಲನೆಗೊಳಿಸುವ ಸಲುವಾಗಿ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ಫೆಬ್ರವರಿ 7ರಿಂದ 28ರವರೆಗೆ ಲಸಿಕೆ ಹಾಕುವ ಮೂಲಕ ವಿಶೇಷ ಅಭಿಯಾನ ನಡೆಯುತ್ತಿದೆ ಎಂದು ವೈದ್ಯರಾದ ಇಂದೂಧರ್ ಹೇಳಿದರು.
ಇಲ್ಲಿಗೆ ಸಮೀಪದ ಸಾಂದಿಪನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ದಡಾರ-ರುಬೆಲ್ಲಾ ಚುಚ್ಚು ಮದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಡಾರ ಕಾಯಿಲೆ ಮಾರಣಾಂತಿಕ ಕಾಯಿಲೆಯಾಗಿದ್ದು, ಅದರ ಸೋಂಕು 15 ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತದೆ. ಇದರ ಸೋಂಕು ತಗುಲಿದ ಮಕ್ಕಳಿಗೆ ಜ್ವರ, ಮೂಗು ಸೋರುವಿಕೆ, ಕಣ್ಣಿನಲ್ಲಿ ನೀರು ಬರುವದು, ಮೈತುಂಬಾ ಗಂಧೆಗಳು ಮುಂತಾದ ಲಕ್ಷಣಗಳನ್ನು ಕಾಣಬಹುದು. ಈ ಸೋಂಕು ತಗುಲಿದರೆ ಮಕ್ಕಳಲ್ಲಿ ನ್ಯುಮೋನಿಯ, ಅಪೌಷ್ಟಿಕತೆ, ಕಿವಿ ಸೋರುವಿಕೆ, ಅತಿಸಾರಭೇದಿ ಮುಂತಾದ ಅಪಾಯವನ್ನುಂಟುಮಾಡುವ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ತಾಯಿಯ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ರುಬೆಲ್ಲಾದ ಸೋಂಕು ತಗುಲಿದಲ್ಲಿ ಹುಟ್ಟುವ ಮಗು ಕುರುಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ, ಮಾನಸಿಕ ಅಸ್ವಸ್ಥತೆ, ಕಿವುಡುತನ, ಹೃದಯ ಸಂಬಂಧಿ ನ್ಯೂನತೆಗಳು, ಹೊಟ್ಟೆಯಲ್ಲೇ ಸಾಯುವುದು, ಗರ್ಭಪಾತ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪೋಷಕರು ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಎಂ.ಆರ್(ಮೀಸಲ್ಸ್-ರುಬೆಲ್ಲಾ) ಲಸಿಕೆಯನ್ನು ಸೂಕ್ತ ಸಮಯದಲ್ಲಿ ಹಾಕಿಸುವ ಮೂಲಕ ಕಾಯಿಲೆ ಬಾರದಂತೆ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಸರ್ಕಾರ ರುಬೆಲ್ಲ ಹಾಗೂ ದಡಾರ ಕಾಯಿಲೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಪಡೆದು ಕಾಯಿಲೆ ನಿರ್ಮೂಲನೆಗೆ ಪೋಷಕರು ಮುಂದಾಗಬೇಕೆಂದರು.
ಕಾರ್ಯಕ್ರಮಕ್ಕೆ ಸಾಂದಿಪನಿ ಆಂಗ್ಲ ಮಾದ್ಯಮ ಶಾಲೆಯ ಆಡಳಿತ ಮಂಡಳಿಯ ಲಿಖಿತ್ ದಾಮೋಧರ್ ಚಾಲನೆ ನೀಡಿದರು. ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ, ಮುಖ್ಯ ಶಿಕ್ಷಕ ಕಿಶೋರ್‍ಕುಮಾರ್, ಶಾಲಾಭಿವೃದ್ಧಿ ಸಮತಿ ಅಧ್ಯಕ್ಷ ಶ್ರೀಕಾಂತ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಶಾಲೆಯಲ್ಲೂ ಲಸಿಕೆ ವಿತರಣೆ: ದಡಾರ ಹಾಗೂ ರುಬೆಲ್ಲಾ ರೋಗಗಳಿಂದ ರಕ್ಷಿಸುವ ಉದ್ದೇಶದಿಂದ ಶಾಲೆಗಳಲ್ಲಿ ನೀಡುವ ಉಚಿತ ಲಸಿಕೆ ಅಭಿಯಾನ ಕಾರ್ಯವನ್ನು ಗ್ರಾಮೀಣ ಪ್ರದೇಶವಾದ ಶಾಂತಳ್ಳಿ ಸಮೀಪದ ನಗರಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಎಸ್. ಶ್ರುತಿ ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯಶಿಕ್ಷಕಿ ಆರ್. ಭಾರತಿ, ಅಂಗನವಾಡಿ ಕಾರ್ಯಕರ್ತೆ ರಾಜಮ್ಮ, ಆಶಾ ಕಾರ್ಯಕರ್ತೆ ರೀತಾ ಇದ್ದರು. ಅಭಿಯಾನಕ್ಕೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದು, ಯಶಸ್ಸಿಗೆ ಸಹಕರಿಸಿದರು.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೋರಾರ್ಜಿ ವಸತಿ ಶಾಲೆಯಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ದಡಾರಾ-ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದÀರ್ಭ ತಾಲೂಕು ಆರೋಗ್ಯ ಅಧಿಕಾರಿ ಪಾರ್ವತಿ ಹಾಜರಿದ್ದು, ಚುಚ್ಚುಮದ್ದಿನ ಪ್ರಯೋಜನದ ಬಗ್ಗೆ ವಿವರಿಸಿದರು.
ಬಸವನಹಳ್ಳಿಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚೇತನ್ ಮಾತನಾಡಿ, ಲಸಿಕೆ ಬಗ್ಗೆ ಕೆಲವರು ಗಾಳಿ ಸುದ್ದಿ ಹರಡಿಸುತ್ತಿದ್ದು, ಪೋಷಕರು ಅಪಪ್ರಚಾರಗಳಿಗೆ ಕಿವಿಕೊಡದಂತೆ ಸಲಹೆಯಿತ್ತರು.
ಮಕ್ಕಳಿಗೆ ಲಸಿಕೆ ಹಾಕಿಸಲು ಸಹಕರಿಸುವಂತೆ ಮನವಿ ಮಾಡಿದರು. ಅಲ್ಲದೆ ಯಾವದೆ ರೀತಿಯ ಅಡ್ಡಪರಿಣಾಮ ಬೀರುವದಿಲ್ಲ ಎಂಬದಾಗಿ ತಿಳಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದÀರ್ಭ ಮೋರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮತ್ತು ಡಾ. ಪ್ರಶಾಂತ್ ಮತ್ತು ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖಾ ಹಿರಿಯ ಅಧಿಕಾರಿಗಳು ಹಾಜರಿದ್ದರು.