ಮಡಿಕೇರಿ, ಫೆ.7 : ಕೊಡವ ಜಾತಿಯ ದಾಖಲೆಯನ್ನು ಕೊಡಗರು ಎಂದು ಪರಿಗಣಿಸುವ ಬದಲು ನ್ಯಾಯಾಲಯದ ಆದೇಶದಂತೆ ‘ಕೊಡವ’ ಎಂದು ನಮೂದಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ರಾಜ್ಯದ ದಾಖಲೆಗಳಲ್ಲಿ ಕೊಡವ ಎನ್ನುವ ಬದಲಿಗೆ ಕೊಡಗರು ಎಂದು ನಮೂದಿಸಲಾಗಿದ್ದು, ಇದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆಯೆಂದು ಅಭಿಪ್ರಾಯಪಟ್ಟರು. 2015ರ ಜಾತಿವಾರು ಜನಗಣತಿ ಪ್ರಾರಂಭಕ್ಕೆ ಮೊದಲು ಸರ್ಕಾರಿ ದಾಖಲೆಗಳಲ್ಲಿ ಕೊಡವ ಎಂದು ನಮೂದಿಸಬೆÉೀಕೆಂದು 2015 ಏಪ್ರಿಲ್ 1 ರಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಈ ಸಂಬಂಧ ಡಾ| ದ್ವಾರಕಾನಾಥ್ ಆಯೋಗದ ಶಿಫಾರಸ್ಸಿಗೆ ಮಂತ್ರಿ ಮಂಡಲವು ಒಪ್ಪಿಗೆ ಸೂಚಿಸಿತ್ತು. ಆದರೆ, ಗೆಜೆಟ್ ನೋಟಿಫಿಕೇಷನ್ ಹೊರಡಿಸದೆ ವಿಳಂಬ ಧೋರಣೆ ತಾಳಲಾಯಿತು. ಇದು ಕೊಡವರಿಗೆ ಮಾಡಿದ ದ್ರೋಹವಾಗಿದೆಯೆಂದು ಆರೋಪಿಸಿದ ಎನ್.ಯು. ನಾಚಪ್ಪ, ಈ ಹಿಂದೆ ನ್ಯಾಯಾಲಯ ನೀಡಿದ ಆದೇಶವನ್ನು ಸರ್ಕಾರ ಪರಿಪಾಲಿಸಬೇಕೆಂದು ಒತ್ತಾಯಿಸಿ ಮತ್ತೊಮ್ಮೆ ಸಿಎನ್‍ಸಿ ಸಂಘಟನೆ ರಾಜ್ಯಪಾಲರು, ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖಾ ಸಚಿವರು, ಜಿಲ್ಲೆಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿದೆ. ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪಿಸುವಂತೆ ಒತ್ತಾಯಿಸಿದೆ ಎಂದು ತಿಳಿಸಿದರು.
ಕೊಡಗರು ಎಂದು ತಪ್ಪಾಗಿ ದಾಖಲಾಗಿರುವದನ್ನು ಪ್ರಶ್ನಿಸಿ 2009-10 ರಲ್ಲಿ ಸಿಎನ್‍ಸಿ ಸಂಘಟನೆ ಅಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ| ದ್ವಾರಕಾನಾಥ್ ಅವರಿಗೆ ಜ್ಞಾಪನಾ ಪತ್ರ ಸಲ್ಲಿಸಿತ್ತು. ದ್ವಾರಕಾನಾಥ್ ಅವರು ಈ ಸಂಬಂಧ ಸರ್ಕಾರಕ್ಕೆ ವಿಸ್ತøತ ವರದಿ ನೀಡಿ ದಾಖಲೆಗಳಲ್ಲಿ ಕೊಡವರು ಎಂದು ನಮೂದಿಸುವಂತೆ ಸಲಹೆ ನೀಡಿತ್ತು. ಆದರೆ, ಅಧಿಕೃತವಾಗಿ ಗೆಜೆಟ್ ನೋಟಿಫಿಕೇಶನ್ ಹೊರಡಿಸದ ಕಾರಣ 2015 ರಲ್ಲಿ ರಿಟ್ ಆಫ್ ಮ್ಯಾಂಡಮಸ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇಲ್ಲಿಯವರೆಗೆ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ 2016 ರಲ್ಲಿ ಮತ್ತೆ ಸಿಎನ್‍ಸಿ ಸಂಘಟನೆ ನ್ಯಾಯಾಲಯದ ಮೊರೆ ಹೋಗಿತ್ತು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ತುರ್ತಾಗಿ ಆದೇಶ ಪಾಲನೆಗೆ ಸೂಚನೆ ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ಮನೋಭಾವ ತಾಳಿದೆ ಎಂದು ನಾಚಪ್ಪ ಆರೋಪಿಸಿದರು.
ಸರ್ಕಾರದ ವಿಳಂಬ ಧೋರಣೆಯಿಂದ ಕೊಡವರಿಗೆ ಅನ್ಯಾಯವಾಗಿದ್ದು, ಪ್ರವರ್ಗ 3ಎ ಯಲ್ಲಿ ಉದ್ಯೋಗ, ವಿದೇಶ ಪ್ರಯಾಣ, ಆಧಾರ್ ಕಾರ್ಡ್, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಅಗತ್ಯತೆಗಳಿಗೆ ಜಾತಿ ದೃಢೀಕರಣ ಪತ್ರ ಪಡೆಯಲು ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾತಿ ದೃಢೀಕರಣ ಪತ್ರದಲ್ಲಿ ಕೊಡಗರು ಎಂದು ನಮೂದಿಸಲಾಗುತ್ತಿದ್ದು, ಕೊಡವರನ್ನು ನಾಮಾವಶೇಷ ಮಾಡಲು ಷಡ್ಯಂತ್ರ ನಡೆಯುತ್ತಿದೆ ಎಂದು ನಾವು ಭಾವಿಸಿಕೊಳ್ಳಬೇಕಾಗುತ್ತದೆಂದು ನಾಚಪ್ಪ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.