ಕುಶಾಲನಗರ, ಫೆ. 7: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ಪರಿಸರ ಕಾಯ್ದೆ ಉಲ್ಲಂಘಿಸಿರುವ ಜಿಲ್ಲೆಯ ಯುವಕಪಾಡಿಯ ತಾಮರ ರೆಸಾರ್ಟ್‍ಗೆ ಮಂಡಳಿ ನೋಟೀಸ್ ಜಾರಿ ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ರೆಸಾರ್ಟ್‍ನ ವ್ಯವಸ್ಥಾಪಕರಿಗೆ ನೋಟೀಸ್ ನೀಡಿದ್ದು 15 ದಿನಗಳ ಒಳಗಾಗಿ ಸಮಜಾಯಿಷಿಕೆ ನೀಡುವದರೊಂದಿಗೆ 2 ತಿಂಗಳ ಅವಧಿಯಲ್ಲಿ ಸರಿಪಡಿಸುವದು. ಇಲ್ಲದಿದ್ದಲ್ಲಿ ಪರಿಸರ ಕಾಯ್ದೆ ಅನ್ವಯ ಕಾನೂನು ಕ್ರಮಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಜನವರಿ 22 ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮತ್ತು ಅಧಿಕಾರಿಗಳ ತಂಡ ರೆಸಾರ್ಟ್‍ಗೆ ಧಾಳಿ ಮಾಡಿ ಪರಿಶೀಲಿಸಿದ ಸಂದರ್ಭ ಪರಿಸರ ಕಾಯ್ದೆ ಉಲ್ಲಂಘನೆ ಕಂಡುಬಂದಿದೆ. ರೆಸಾರ್ಟ್‍ನಲ್ಲಿ ಬೆಟ್ಟದ ಮೂಲಕ ಹರಿದು ಬರುತ್ತಿರುವ ಜಲಮೂಲಗಳಿಗೆ ತಡೆಯೊಡ್ಡಿ ಕಲುಷಿತಗೊಳಿಸಿರುವದು, ಮಂಡಳಿಯ ಅನುಮತಿ ಪಡೆಯದೆ ಹಲವು ಕಾಮಗಾರಿ ನಡೆದಿರುವದು, ಬೃಹತ್ ಅಶ್ವಶಕ್ತಿಯ ಜನರೇಟರ್ ಮೂಲಕ ಶಬ್ಧ ಮಾಲಿನ್ಯ, ಎಸ್‍ಟಿಪಿ ನಿರ್ವಹಣೆ ಸಂಪೂರ್ಣ ವಿಫಲವಾಗಿದ್ದು ಇಂತಹ ಅನೇಕ ನ್ಯೂನತೆಗಳು ಕಂಡುಬಂದಿವೆ. ಈ ಬಗ್ಗೆ 2014 ರ ನಂತರ ಹಲವು ಬಾರಿ ಪರಿಶೀಲನೆ ನಡೆಸಿದ್ದು ನಂತರ ನೋಟೀಸ್‍ಗಳನ್ನು ನೀಡಲಾಗಿತ್ತು. ತದನಂತರ ಮಂಡಳಿಯ ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಅದೇ

(ಮೊದಲ ಪುಟದಿಂದ) ನ್ಯೂನತೆಗಳು ಮುಂದುವರೆದಿರುವದು ಕಂಡುಬಂದಿದೆ.

ಈ ಎಲ್ಲಾ ನ್ಯೂನತೆಗಳನ್ನು ತಕ್ಷಣ ಸರಿಪಡಿಸುವದರೊಂದಿಗೆ ನಿಗದಿತ ಸಮಯದಲ್ಲಿ ಸಮಜಾಯಿಷಿಕೆ ನೀಡುವಂತೆ ನೋಟೀಸ್‍ನಲ್ಲಿ ತಿಳಿಸಲಾಗಿದೆ ಎಂದು ಮಂಡಳಿಯ ಸದಸ್ಯ ಜೋಗೀರ ಕಾವೇರಿಯಪ್ಪ ತಿಳಿಸಿದ್ದಾರೆ. ತಪ್ಪಿದಲ್ಲಿ 1974 ರ ಕಾಯ್ದೆ ಹಾಗೂ ಪರಿಸರ ಮಾಲಿನ್ಯ 1989 ರ ಕಾಯ್ದೆಯನ್ವಯ ಕ್ರಮಕ್ಕೆ ಮಂಡಳಿ ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.