ಮಡಿಕೇರಿ, ಫೆ. 7: ಇಡೀ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ವಿದೇಶಿ ತಳಿಯ ತರಕಾರಿ ಸೇರಿದ ಹೂವಿನ ಬೆಳೆ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ, ಮಾಹಿತಿ ನೀಡುವ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಪ್ರಾರಂಭಿಸಿರುವ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಇದಕ್ಕೆ ಸಿದ್ಧಗೊಂಡಿದೆ.ಸದ್ಯದಲ್ಲಿ ಈ ಸ್ಥಳದಲ್ಲಿ ರೈತರಿಗೆ ಮಾಹಿತಿ - ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕೇಂದ್ರ ಈ ಹಿಂದೆ ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಳಿಕ ಜಿಲ್ಲಾ ಕೇಂದ್ರದಲ್ಲಾದರೆ ಇಡೀ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಇದನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ಕಳೆದ ಡಿಸೆಂಬರ್‍ನಿಂದ ಕಾಮಗಾರಿ ನಡೆದಿದ್ದು, ಇದೀಗ ತರಕಾರಿ ಫಸಲಿಗೆ ಬಂದಿದ್ದರೆ, ಅಂಥೂರಿಯಂ ಗಿಡ ಇನ್ನು ನಾಲ್ಕು ತಿಂಗಳಲ್ಲಿ ಹೂ ಬಿಡಲಿದೆ.

ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಈ ಕೃಷಿ ವಿ.ವಿ.ಗೆ ಸೇರಿದ ಈ ಜಾಗದಲ್ಲಿ (ಖಾಸಗಿ ಬಸ್ ನಿಲ್ದಾಣಕ್ಕೆ ವಿ.ವಿ. ನೀಡಿರುವ ಜಾಗದ ಸನಿಹ) ರೂ. 1.30 ಕೋಟಿ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ನಾಲ್ಕು ಪಾಲಿ ಹೌಸ್ ನಿರ್ಮಿಸಲಾಗಿದ್ದು, ಇದರಲ್ಲಿ ಆಧುನಿಕ ಮಾದರಿಯಲ್ಲಿ ಬೆಳೆ ಬೆಳೆಯಲಾಗಿದೆ. ಈ ಹಿಂದೆ ಇಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. ಭತ್ತದ ಬೀಜೋತ್ಪಾದನೆಯೂ ಮುಂದುವರಿ ಯಲಿದ್ದು, ಭತ್ತ ಬೆಳೆದ ಬಳಿಕ ಈ ಗದ್ದೆಯಲ್ಲೂ ತರಕಾರಿ (ಅಲಸಂಡೆ ಬೀನ್ಸ್) ಬೆಳೆಯಲೂ ಸಿದ್ಧತೆ ನಡೆದಿದೆ.

ಪಾಲಿಹೌಸ್‍ನಲ್ಲಿ ನೂಕೋಲು, ಕ್ಯಾಬೇಜ್, ಕಾಲಿಫ್ಲವರ್, ಕ್ಯಾಪ್ಸಿಕಮ್, ಕೊತ್ತಂಬರಿ, ಪಾಲಕ್, ಬದನೆ, ಹಸಿಮೆಣಸು, ಸೌತೆ, ಚಿಕ್ಕಕುಂಬಳ, ಬೀನ್ಸ್, ವಿದೇಶಿ ತಳಿಯಾದ ಚೈನೀಸ್ ಕ್ಯಾಬೇಜ್, ಲೆಟ್ಯೂಸ್, ಬ್ರೋಕೋಲಿ, ರೆಡ್ ಕ್ಯಾಬೇಜ್, ಸೆಲರಿ, ಲೀಕ್, ಕ್ಯುಲಾಂಡ್ರೋ (ಕಾಡು ಕೊತ್ತಂಬರಿ) ದಂತಹ ತಳಿಯ ತರಕಾರಿಗಳನ್ನು ಬೆಳೆಯಲಾಗಿದ್ದು, ರೈತರ ವೀಕ್ಷಣೆಗೆ (ಪ್ರಾತ್ಯಕ್ಷಿಕೆ) ಸಜ್ಜಾಗಿದೆ. ಮೂಲಂಗಿ, ನೂಕೋಲು, ಸೌತೆ ಫಸಲನ್ನು ಸ್ವಲ್ಪ ಪ್ರಮಾಣದಲ್ಲಿ ಕುಯಿಲೂ ಮಾಡಲಾಗಿದ್ದು, ಇದನ್ನು ಮಾರಾಟ ಮಾಡಲಾಗಿದೆ. ಐದರಿಂದ ಆರು ವಿಧದ ಬದನೆ, ತಲಾ ಐದೈದು ವಿಧದ ಬೀನ್ಸ್ ಹಾಗೂ ಮೆಣಸು ಗಿಡ ಇಲ್ಲಿ ಸಿದ್ಧಗೊಂಡಿದೆ. ಲೆಟ್ಸೂಸ್‍ನಲ್ಲಿ 7 ವಿಧದ ತರಕಾರಿಯಿದೆ.

ನಾಲ್ಕು ವಿಧದ ಆಂಥೂರಿಯಂ ಗಿಡ ಬೆಳೆಯಲಾಗುತ್ತಿದ್ದು, ನಾಲ್ಕು ತಿಂಗಳಲ್ಲಿ ಹೂ ಬಿಡಲಿದೆ. ಇದರಲ್ಲಿ ಟ್ರಾಫಿಕಲ್ (ರೆಡ್ ಕಲರ್) ಮೂಮೆಂಟ್ಸ್ (ವೈಟ್) ಚೀರ್ಸ್ (ಪಿಂಕ್) ಪಿಸ್ಕಾಟ್ (ಗ್ರೀನ್) ತಳಿಯ ಗಿಡಗಳನ್ನು ಬೆಳೆಯಲಾಗುತ್ತಿದೆ. ಇನ್ನೊಂದು ಪಾಲಿಹೌಸ್‍ನಲ್ಲಿ ವಿದೇಶಿ ತಳಿಯ ತರಕಾರಿ ಗಿಡವನ್ನು ಸಿದ್ಧಪಡಿಸ ಲಾಗುತ್ತಿದೆ.

(ಮೊದಲ ಪುಟದಿಂದ) ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಬೆಳೆಗಳ ಮೂಲಕ ಉತ್ತಮ ತೋಟಗಾರಿಕಾ ತಾಣವಾಗಿ ಇದನ್ನು ರೂಪುಗೊಳಿಸಲಾಗುತ್ತಿದ್ದು, ಸದ್ಯದಲ್ಲಿ ರೈತರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗುವದು ಎಂದು ಕ್ಷೇತ್ರ ಅಧೀಕ್ಷಕ ರಾಜಶೇಖರ್ ಬಾರಕೇರ ಅವರು ‘ಶಕ್ತಿ’ಗೆ ತಿಳಿಸಿದರು.

ಕೃಷಿ ಮತ್ತು ತೋಟಗಾರಿಕಾ ವಿಸ್ತರಣಾ ಘಟಕದ ಮುಖ್ಯಸ್ಥ ನೆಲ್ಲೀರ ಪೂಣಚ್ಚ ಅವರ ನೇತೃತ್ವದಲ್ಲಿ ಕ್ಷೇತ್ರ ಅಧೀಕ್ಷಕ ರಾಜಶೇಖರ ಬಾರಕೇರ, ತೋಟಗಾರಿಕಾ ಪದವೀಧರ ಪ್ರವೀಣ್, ಸಹಾಯಕ ಪ್ರಾಧ್ಯಾಪಕಿ ಹೀನಾ ಅವರುಗಳು ಇದರ ಉಸ್ತುವಾರಿಯಲ್ಲಿದ್ದಾರೆ. -ಶಶಿ