ಮಡಿಕೇರಿ, ಫೆ.6 :ಕೊಡಗು ಜಿಲ್ಲಾ ಕಾಂಗ್ರೆಸ್‍ನ ಮಹಿಳಾ ಘಟಕದ ಬಲವರ್ಧನೆಗಾಗಿ ಘಟಕವನ್ನು ಪುನರ್ ರಚನೆ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದೆಂದು ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷೆ ಜಿ.ಆರ್.ಪುಷ್ಪಲತಾ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಮಹಿಳಾ ಕಾಂಗ್ರೆಸ್‍ನ ವಿವಿಧ ಸಮಿತಿ ಮತ್ತು ಐದು ಬ್ಲಾಕ್‍ಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಶೀಘ್ರ ಮಾಡಲಾಗುವದು. ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವ ಉದ್ದೇಶದಿಂದ ಎಲ್ಲಾ ಸಮುದಾಯಗಳ ಮಹಿಳಾ ಕಾರ್ಯಕರ್ತರಿಗೂ ಪ್ರಾಮುಖ್ಯತೆ ನೀಡಲಾಗುವದು.

ಮುಂದಿನ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯ ಹಿರಿಯ ನಾಯಕರ ಸಲಹೆ, ಸೂಚನೆಗಳನ್ನು ಪಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದು. ಮಹಿಳಾ ಕಾಂಗ್ರೆಸ್ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಇದಕ್ಕೂ ಮೊದಲು ನೂತನ ಸಮಿತಿಗಳನ್ನು ರಚಿಸಲಾಗುವದೆಂದು ಪುಷ್ಪಲತಾ ತಿಳಿಸಿದ್ದಾರೆ.