ಸೋಮವಾರಪೇಟೆ, ಫೆ. 7: ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿರುವ ಅರಿವಿದ್ದರೂ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ರೈತರಿಗೆ ಹಾಗೂ ಕಾಫಿ ಬೆಳೆಗಾರರ ವಿಶೇಷ ಅನುದಾನ ಕಲ್ಪಿಸದೆ ನಿರ್ಲಸಕ್ಷಿಸಿ ಲಾಗಿದೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ದೂರಿದ್ದಾರೆ.ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕೃಷಿಕರ ಸಾಲವನ್ನು ಮನ್ನಾ ಮಾಡುವ ನಿರೀಕ್ಷೆಯನ್ನು ಹುಸಿಗೊಳಿಸಿ, ರೈತ ವಿರೋಧಿ ನೀತಿಯನ್ನು ತೋರ್ಪಡಿಸಿದೆ ಎಂದು ಹೇಳಿದರು.
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕಾಫಿ ಉದ್ಯಮ ತನ್ನದೆ ಆದ ಕೊಡುಗೆ ನೀಡುತ್ತಿದೆ. ಆದರೆ ಕಾಫಿ ಬೆಳೆಗಾರರು ಕಳೆದ ಒಂದು ದಶಕದಿಂದ ಪ್ರತಿವರ್ಷ ಪ್ರಕೃತಿ ವಿಕೋಪದಿಂದ ಫಸಲು ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಆದರೆ ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಪಂದಿಸುತ್ತಿಲ್ಲ. ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಕೆಸರರಾಚಾಟದಲ್ಲಿ ತೊಡಗಿ ಕೊಂಡಿವೆ. ಇದೇ ರೀತಿ ಬೆಳೆಗಾರರನ್ನು ನಿರ್ಲಕ್ಷಿಸಿದಲ್ಲಿ ಮುಂದಿನ ಚುನಾವಣೆ ಯನ್ನು ಬಹಿಷ್ಕರಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರಕಾರಕ್ಕೆ ತಲಪಿಸುವಲ್ಲಿ ಸಂಸದ ಪ್ರತಾಪ್ ಸಿಂಹ ವಿಫಲ ರಾಗಿದ್ದಾರೆ. ಆಹ್ವಾನ ನೀಡಿದರೂ ಬೆಳೆಗಾರರ ಯಾವದೇ ಸಭೆಗಳಿಗೆ ಆಗಮಿಸುತ್ತಿಲ್ಲ. ಇದೇ ರೀತಿ ಸಂಸದರು ಪದೇ ಪದೇ ಕೊಡಗಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದಲ್ಲಿ ಬೆಳೆಗಾರರ ಸಂಘವು ಇತರ ಸಂಘ ಸಂಸ್ಥೆಗಳ
(ಮೊದಲ ಪುಟದಿಂದ) ಸಹಕಾರದೊಂದಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಕಾಫಿ ಕೊಯ್ಲು ಮುಗಿಯುವ ಮುನ್ನವೇ ಮಳೆ ಬಂದಿರುವದರಿಂದ, ಮುಂದಿನ ಸಾಲಿನಲ್ಲಿ ಫಸಲು ನಷ್ಟ ಅನುಭವಿಸಬೇಕಾಗಿದೆ. ಅಕಾಲಿಕ ಮಳೆಯಿಂದ ಬೆಳೆಗಾರರಿಗೆ ನಷ್ಟವಿಲ್ಲ ಎಂಬ ಅರ್ಥದಲ್ಲಿ ಕಾಫಿ ಮಂಡಳಿ ಅಧಿಕಾರಿಗಳು ಪ್ರಚಾರ ಮಾಡುತ್ತಿದ್ದಾರೆ. ನಷ್ಟದ ಬಗ್ಗೆ ವೈಜ್ಞಾನಿಕ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೀಡಬೇಕು. ಸುಳ್ಳು ವರದಿ ನೀಡಿದರೆ ಕಾಫಿ ಮಂಡಳಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಮೋಹನ್ ಬೋಪಣ್ಣ ಎಚ್ಚರಿಸಿದರು.
ಕಾಫಿ ಖರೀದಿದಾರರು ಒಳ ಒಪ್ಪಂದ ಮಾಡಿಕೊಂಡು ದರ ಸಮರ ನಡೆಸುತ್ತಿದ್ದಾರೆ. ಚಿಕ್ಕಮಗಳೂರು, ಹಾಸನ ಮತ್ತು ಸಕಲೇಶಪುರ ವ್ಯಾಪ್ತಿಯಲ್ಲಿ ಇರುವ ಮಾರುಕಟ್ಟೆ ದರ ಕೊಡಗು ಜಿಲ್ಲೆಯಲ್ಲಿ ಇರುವದಿಲ್ಲ. ಕೆಲವು ಕಾಫಿ ಖರೀದಿದಾರರು ಬೆಳೆಗಾರರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು. ಕಾಫಿ ಖರೀದಿ ಕೇಂದ್ರಗಳಲ್ಲಿ ಖರೀದಿದಾರರು ಆಯಾ ದಿನದ ದರದ ವಿವರಣೆಯನ್ನು ಫಲಕದಲ್ಲಿ ಅಳವಡಿಸಬೇಕು ಎಂದರು. ಈ ಹಿಂದೆ ಬೆಳೆಗಾರರ ಸಂಘವು ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಕಾಫಿ ಒಣಗಿಸುವ ಘಟಕವನ್ನು ನೀಡಬೇಕೆಂದು ಕಾಫಿ ಮಂಡಳಿ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನ ಆಗಿರುವದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಕೊಡಗು ಜಿಲ್ಲೆಯ ವಸ್ತು ಸ್ಥಿತಿಯ ಬಗ್ಗೆ ಅರಿವು ಇಲ್ಲ. ಜಿಲ್ಲೆಯಲ್ಲಿ ಕೊಳವೆ ಬಾವಿ ತೆಗೆದರೆ ಯಾವದೇ ಸಮಸ್ಯೆ ಇಲ್ಲ. ನೀರಿಲ್ಲದರೆ ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕೊಡಗಿನ ಜನರು ಕಾವೇರಿ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಕೊಳವೆ ಬಾವಿ ಕೊರೆಸಲು ಸರ್ಕಾರ ನಿಷೇಧ ಹೇರಿದೆ. ಇಂತಹ ಅನ್ಯಾಯವನ್ನು ಕೊಡಗಿನ ಜನತೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಉಸ್ತುವಾರಿ ಸಚಿವರು ಹೊರ ಜಿಲ್ಲೆಯವರಾಗಿರುವದರಿಂದ ಇಲ್ಲಿನ ಬೆಳೆಗಾರರು ಮತ್ತು ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ದೂರಿದರು.
ಕಾಫಿ ಬೆಳೆಗಾರರು ಕಾಫಿ ಮಂಡಳಿ ಅಧ್ಯಕ್ಷರಾದಾಗ ಮಾತ್ರ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಯುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಹೋರಾಟ ಮಾಡಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಸುರೇಶ್ ಹೇಳಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ತಾಕೇರಿ ಪ್ರಕಾಶ್, ಎಡದಂಟೆ ಲವ, ಬಿ.ಜಿ. ಪೂವಮ್ಮ, ಎ.ವಿ. ನೀಲಕಂಠಪ್ಪ ಮತ್ತಿತರು ಇದ್ದರು.